ಇಂಡಿಯನ್ ಆಯಿಲ್‍ನಿಂದ ದೇಶದಲ್ಲಿ 100 ಆಕ್ಟೇನ್ ಪೆಟ್ರೋಲ್ ಬಿಡುಗಡೆ

Update: 2020-12-03 18:11 GMT

ಬೆಂಗಳೂರು, ಡಿ.3: ಉನ್ನತ ಶ್ರೇಣಿಯ ಬೈಕ್ ಮತ್ತು ಕಾರುಗಳಿಗೆ ವಿಶ್ವದ ಅತ್ಯುತ್ತಮ ಪ್ರೀಮಿಯಂ ದರ್ಜೆಯ 100 ಆಕ್ಟೇನ್ ಪೆಟ್ರೋಲ್ ಅನ್ನು ಇಂಡಿಯನ್ ಆಯಿಲ್ ವತಿಯಿಂದ ದೇಶದಲ್ಲಿ ಪ್ರಪ್ರಥಮ ಬಾರಿಗೆ ಬಿಡುಗಡೆ ಮಾಡಲಾಗಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಇಲಾಖೆಯ ಕಾರ್ಯದರ್ಶಿ ತರುಣ್ ಕಪೂರ್, ಇಂಡಿಯಲ್ ಆಯಿಲ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ, ನಿರ್ದೇಶಕ(ಸಂಶೋಧನೆ ಮತ್ತು ಅಭಿವೃದ್ಧಿ) ಡಾ.ಎಸ್.ಎಸ್.ವಿ.ರಾಮಕುಮಾರ್, ನಿರ್ದೇಶಕ(ಮಾರುಕಟ್ಟೆ) ಗುರ್‍ಮೀತ್ ಸಿಂಗ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳ ವರ್ಚುವಲ್ ಉಪಸ್ಥಿತಿಯಲ್ಲಿ ಎಕ್ಸ್.ಪಿ.100 ಎಂಬ ಬ್ರಾಂಡ್ ಹೊಂದಿರುವ ಪ್ರೀಮಿಯಂ ಗ್ರೇಡ್ ಪೆಟ್ರೋಲ್ ಅನ್ನು ದೇಶದ 10 ನಗರಗಳಲ್ಲಿ ಬಿಡುಗಡೆ ಮಾಡಲಾಯಿತು.

ಇಂಡಿಯಲ್ ಆಯಿಲ್‍ನ ಈ ಮಾರುಕಟ್ಟೆ ಕ್ರಮವನ್ನು ಶ್ಲಾಘಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಈ ಇಂಧನದೊಂದಿಗೆ, 100 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಟೇನ್ ಸಂಖ್ಯೆಯ ಪೆಟ್ರೋಲ್ ಮಾರಾಟ ಮಾಡುವ ವಿಶ್ವದ ಆಯ್ದ ದೇಶಗಳ ಸಾಲಿಗೆ ಭಾರತವು ಸೇರಿಕೊಂಡಿದೆ. ಎಕ್ಸ್.ಪಿ.100 ನಂತಹ ವಿಶ್ವದರ್ಜೆಯ ಉತ್ಪನ್ನಗಳ ಬಿಡುಗಡೆ ಎಲ್ಲರಿಗೂ ಉತ್ತಮ ಇಂಧನ ಪರಿಹಾರಗಳನ್ನು ಒದಗಿಸುವತ್ತ ನಾವು ಗಮನಹರಿಸಿದ್ದೇವೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.

ನಮ್ಮ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸ್ವದೇಶಿ ತಂತ್ರಜ್ಞಾನದೊಂದಿಗೆ ಈ ಪರಿಹಾರಗಳನ್ನು ನಿಯೋಜಿಸಲಾಗುತ್ತಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಪ್ರಧಾನ ಮಂತ್ರಿಯವರ ಇಂಧನ ಅಭಿಯಾನಕ್ಕೆ ಅನುಗುಣವಾಗಿದ್ದು, ಇಂಧನ ಕ್ಷೇತ್ರದಲ್ಲಿ ನಮ್ಮ ಸರಕಾರ ತೀವ್ರವಾಗಿ ಜಾರಿಗೆ ತರುತ್ತಿರುವ ಆತ್ಮನಿರ್ಭರ ಭಾರತ್ ಉಪಕ್ರಮದ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದರು.

ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಮಾತನಾಡಿ, ಎಕ್ಸ್.ಪಿ.100 ಎಂಬುದು ನಿಮ್ಮ ಸಂವೇದನೆಯನ್ನು ಪುಳಕಿತಗೊಳಿಸುವಂತೆ ವಿನ್ಯಾಸಗೊಳಿಸಲಾದ ಅತ್ಯಂತ-ಆಧುನಿಕ, ಅಲ್ಟ್ರಾ-ಪ್ರೀಮಿಯಂ ಉತ್ಪನ್ನವಾಗಿದೆ. ಇದು ನಿಮ್ಮ ವಾಹನಕ್ಕೆ ಹೆಚ್ಚಿನ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ನೀಡುವುದಲ್ಲದೆ, ನಿಮಗೆ ಆಹ್ಲಾದಕರ ಚಾಲನೆಯ ಅನುಭವ ನೀಡುವಂಥ ಪೆಟ್ರೋಲ್‍ನ ಅತ್ಯುತ್ತಮ ದರ್ಜೆಯಾಗಿದೆ ಎಂದರು.

ಇಂಡಿಯನ್ ಆಯಿಲ್ ಎಕ್ಸ್.ಪಿ. 100 ಪ್ರೀಮಿಯಂ ಗ್ರೇಡ್ ಪೆಟ್ರೋಲ್ ಅನ್ನು ದೇಶದಾದ್ಯಂತ 15 ಗುರುತಿಸಲಾದ ನಗರಗಳಲ್ಲಿ ಎರಡು ಹಂತದಲ್ಲಿ ಪೂರೈಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಇದು 2020ರ ಡಿಸೆಂಬರ್ 1ರಿಂದ ದಿಲ್ಲಿ, ಗುರುಂಗಾವ್, ನೋಯ್ಡಾ, ಆಗ್ರಾ, ಜೈಪುರ, ಚಂಡೀಗಢ, ಲೂದಿಯಾನ, ಮುಂಬೈ, ಪುಣೆ ಮತ್ತು ಅಹ್ಮದಾಬಾದ್ ನ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಾಗಲಿದೆ. ಎರಡನೇ ಹಂತದಲ್ಲಿ 100 ಆಕ್ಟೈನ್ ಪೆಟ್ರೋಲ್ ಚೆನ್ನೈ, ಬೆಂಗಳೂರು, ಹೈದ್ರಾಬಾದ್, ಕೋಲ್ಕತ್ತಾ ಮತ್ತು ಭುವನೇಶ್ವರದಲ್ಲಿ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News