ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ನಾಳೆ 'ಕರ್ನಾಟಕ ಬಂದ್‍': ಅವಕಾಶ ನೀಡುವುದಿಲ್ಲ ಎಂದ ಸಿಎಂ

Update: 2020-12-04 11:32 GMT

ಬೆಂಗಳೂರು, ಡಿ.4: ರಾಜ್ಯ ಸರಕಾರ ಮರಾಠ ಅಭಿವೃದ್ದಿ ನಿಗಮ ರಚನೆ ಮಾಡಿರುವುದನ್ನು ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಡಿ.5(ನಾಳೆ) ರಾಜ್ಯ ಬಂದ್‍ಗೆ ಕರೆ ನೀಡಿವೆ. ಈ ನಡುವೆ ಬಂದ್‍ಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಹಾಗೂ ಕನ್ನಡಪರ ಸಂಘಟನೆಗಳ ನಡುವೆ ಹಲವು ದಿನಗಳಿಂದ ವಾಗ್ವಾದ ಏರ್ಪಟ್ಟಿದ್ದು, ಬಂದ್‍ಗೆ ಜನತೆಯಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಬಹುದೆಂಬ ಕುತೂಹಲ ಮೂಡಿಸಿದೆ.

ಕರ್ನಾಟಕ ಬಂದ್‍ಗೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿದರೆ, ಕಾಂಗ್ರೆಸ್, ಜೆಡಿಎಸ್ ಬೆಂಬಲ ವ್ಯಕ್ತಪಡಿಸಿವೆ. ವಿರೋಧ ಪಕ್ಷಗಳಿಂದ ಕನ್ನಡ ಪರ ಸಂಘಟನೆಗಳಿಗೆ ನೈತಿಕ ಬೆಂಬಲ ಸಿಕ್ಕಂತಾಗಿದೆ. ಹಾಗೂ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣ, ಪ್ರವೀಣ್‍ ಶೆಟ್ಟಿ, ಓಲಾ, ಉಬರ್ ಹಾಗೂ ಆಟೋ ಚಾಲಕರ ಸಂಘ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಂದ್‍ನಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಂದ್ ವೇಳೆ ಸಂಚಾರ ವ್ಯವಸ್ಥೆಗೆ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಗಡಿಗಳ ಬಂದ್ ಸಿದ್ಧತೆ: ಡಿ.5ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯ ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಖ್ಯವಾಗಿ ಬೆಂಗಳೂರು ಒಳಗೊಂಡಂತೆ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ವಾಹನ ಸಂಚಾರ, ಮಾರುಕಟ್ಟೆಗಳನ್ನು ಡಿ.5ರಂದು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಪತ್ರಿಕಾ ಪ್ರಕಟನೆಯ ಬಿಡುಗಡೆ ಮಾಡಿದ್ದು. ಡಿ.5ರಂದು ಕರವೇ ಕಾರ್ಯಕರ್ತರು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆಂದು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಬಿಎಂಟಿಸಿ, ಮೆಟ್ರೋ, ರೈಲು ಸಂಚಾರ ಎಂದಿನಂತಿರುತ್ತದೆ. ಪರಿಸ್ಥಿತಿಯನ್ನು ನೋಡಿಕೊಂಡು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಸರಕಾರಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ನೈತಿಕ ಬೆಂಬಲ:

ಹೋಟೆಲ್ ಮಾಲಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ ಪೆಟ್ರೋಲ್ ಬಂಕ್ ಮಾಲಕರ ಸಂಘ ಬಂದ್‍ಗೆ ನೈತಿಕ ಬೆಂಬಲ ಮಾತ್ರ ನೀಡಿದ್ದು, ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹಾಗೂ ಮೆಡಿಕಲ್, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಬಂದ್‍ಗೆ ಬೆಂಬಲ:

ಆಟೋ ಚಾಲಕರು, ಮಾಲಕರ ಸಂಘ, ಓಲಾ-ಉಬರ್ ಚಾಲಕರ ಸಂಘ ರಾಜ್ಯ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಈ ಸೇವೆಗಳಲ್ಲಿ ವ್ಯತ್ಯಯ ಕಂಡು ಬರಲಿದೆ.

ಡಿ.5ರಂದು ರಾಜ್ಯ ಬಂದ್ ಯಾವುದೇ ಸಮಾಜದ ವಿರೋಧವಲ್ಲ. ರಾಜ್ಯ ಸರಕಾರ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ, ಜನಾಂಗವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

-ಟಿ.ಎ.ನಾರಾಯಣ ಗೌಡ, ರಾಜ್ಯಾಧ್ಯಕ್ಷ, ಕರವೇ

ಡಿ.5ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ ರಾಜ್ಯದ ಪ್ರತಿಯೊಬ್ಬ ಜನರ ಸ್ವಾಭಿಮಾನದ ಪ್ರತೀಕವಾಗಿದೆ. ನಾಡು, ನುಡಿಗೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲವೆಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ರಾಜ್ಯ ಬಂದ್‍ಗೆ ಸಂಪೂರ್ಣವಾಗಿ ಬೆಂಬಲ ನೀಡಬೇಕು.

-ವಾಟಾಳ್ ನಾಗರಾಜ್, ಅಧ್ಯಕ್ಷ, ವಾಟಾಳ್ ಪಕ್ಷ

'ರಾಜ್ಯದಲ್ಲಿ ಸಾಮಾನ್ಯ ಜನರಿಗೆ ತೊಂದರೆಯಾಗುವಂತಹ ಯಾವುದೇ ಬಂದ್ ಮಾಡುವ ಅಗತ್ಯವಿಲ್ಲ. ಬಂದ್ ಆಚರಿಸುವುದರಿಂದ ಜನರಿಗೆ ಅನಗತ್ಯ ತೊಂದರೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಂದ್‍ಗೆ ಅವಕಾಶ ನೀಡುವುದಿಲ್ಲ. ಎಲ್ಲ ಜನರನ್ನುಒಟ್ಟಿಗೆ ಕರೆದೊಯ್ಯಲಾಗುವುದು. ಕನ್ನಡಕ್ಕೂ ಆದ್ಯತೆ ನೀಡಲು ಸರಕಾರ ಸಿದ್ಧವಿದೆ. ಹೀಗಾಗಿ ಕನ್ನಡಪರ ಸಂಘಟನೆಗಳ ಮುಖಂಡರು ಬಂದ್ ಆಚರಿಸದೆ ಸಹಕರಿಸಬೇಕು'

-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News