ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ಸಾಧ್ಯತೆ: ಮುಂದಿನ 45 ದಿನ ನಿರ್ಣಾಯಕ ಎಂದ ಆರೋಗ್ಯ ಸಚಿವ ಸುಧಾಕರ್

Update: 2020-12-04 12:23 GMT

ಬೆಂಗಳೂರು, ಡಿ. 4: ಕೋವಿಡ್ ಸೋಂಕಿನ ಎರಡನೆ ಅಲೆ 2021ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಬರುವ ಸಾಧ್ಯತೆ ಇದ್ದು, ಡಿ.20ರಿಂದ ಜನವರಿ 2ರವರೆಗೆ 15 ದಿನಗಳ ಕಾಲ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಲಹಾ ಸಮಿತಿ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕಿನ ಎರಡನೆ ಅಲೆ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳು ಚಳಿಗಾಲದ ಅವಧಿಯಾಗಿದ್ದು, ಮುಂದಿನ 45 ದಿನ ನಿರ್ಣಾಯಕವಾಗಿದೆ ಎಂದರು.

ಬೇರೆ ದೇಶಗಳಲ್ಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದಾಗ 45 ರಿಂದ 90 ದಿನದೊಳಗೆ ಎರಡನೆ ಅಲೆ ಬರುತ್ತದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲೂ ಕೋವಿಡ್ 2ನೆ ಅಲೆ ಬರುವ ಸಾಧ್ಯತೆ ಇದೆ ಎಂದು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಈ ಕುರಿತು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ನಿರ್ಬಂಧ: ಹದಿನೈದು ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು. ಮದುವೆ ಸಮಾರಂಭಕ್ಕೆ 100, ರಾಜಕೀಯ ಹಾಗೂ ಧಾರ್ಮಿಕ ಸಮಾರಂಭಕ್ಕೆ 200, ಮೃತರ ಅಂತ್ಯಕ್ರಿಯೆಯಲ್ಲಿ 50ಕ್ಕಿಂತ ಹೆಚ್ಚು ಜನರ ಸೇರುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಈ ನಿಯಮದೊಂದಿಗೆ ಮಾಸ್ಕ್ ಧರಿಸುವ, ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದರು.

ಸೋಂಕು ಹರಡುವುದನ್ನು ತಡೆಗಟ್ಟಲು ಮುಖ್ಯವಾಗಿ ಜನರು ಗುಂಪುಗೂಡುವುದನ್ನು ನಿಯಂತ್ರಣಕ್ಕೆ ತರಬೇಕಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಹೆಚ್ಚಿನ ಚರ್ಚೆ ನಡೆಸಿ, ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹೊಸ ವರ್ಷಾಚರಣೆ ಅರ್ಥಹೀನ: ನೂತನವರ್ಷ ಭಾರತೀಯರಿಗೆ ಹಬ್ಬವಲ್ಲ. ಕೋವಿಡ್‍ನಿಂದ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಉದ್ಯೋಗ ನಷ್ಟವಾಗಿದೆ, ಆರ್ಥಿಕ ಅಸ್ಥಿರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಮಾಡುವುದು ಅರ್ಥಹೀನ. ಜನರು ಜವಾಬ್ದಾರಿಯುತರಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಡಾ. ಸುಧಾಕರ್ ಮನವಿ ಮಾಡಿದರು.

ಹಾಸಿಗೆ ಹೆಚ್ಚಳ: ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸದಾ ಸಿದ್ಧ. ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಿದರೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಲಾಗಿದೆ ಎಂದ ಅವರು, ಫೆಬ್ರವರಿ ಅಂತ್ಯದವರೆಗೂ ಹೆಚ್ಚು ಕೋವಿಡ್-19 ಪರೀಕ್ಷೆ ನಡೆಸಬೇಕು. ನಿತ್ಯ 1 ಲಕ್ಷ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 3ನೆ ವಾರ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಅಲ್ಲದೆ, ಕೊರೋನ ಎರಡನೆ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News