ಸಹಜ ಸ್ಥಿತಿಯತ್ತ ಮುಖ ಮಾಡಿದ ಶಿವಮೊಗ್ಗ: ಅಂಗಡಿ ಮುಗ್ಗಟ್ಟುಗಳು ಬಂದ್

Update: 2020-12-04 12:41 GMT

ಶಿವಮೊಗ್ಗ, ಡಿ.04: ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲಿನ ಹಲ್ಲೆ ಬಳಿಕ ನಡೆದ ಘರ್ಷಣೆಯ ಬಳಿಕ ನಗರ ಸದ್ಯದ ಪರಿಸ್ಥಿತಿಯಲ್ಲಿ ಪೊಲೀಸರ ಹಿಡಿತದಲ್ಲಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಿಲ್ಲ. ಶಿವಮೊಗ್ಗ ಸಹಜ ಸ್ಥಿತಿಯತ್ತ ಮುಖ ಮಾಡಿದೆ. ನಗರದಲ್ಲಿ ಕರ್ಪ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಅಂಗಡಿಮುಗ್ಗಟ್ಟುಗಳು ಬಂದ್ ಆಗಿವೆ.

ಹಳೆ ಶಿವಮೊಗ್ಗ ಭಾಗ ಪ್ರವೇಶಿಸುವ ಎಲ್ಲಾ ಕಡೆಯಲ್ಲೂ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಕರ್ಫ್ಯೂ ಜಾರಿಯಾಗಿರುವುದರಿಂದ ಈ ಭಾಗದಲ್ಲಿ ವಿನಾಕಾರಣ ಮನೆಯಿಂದ ಯಾರೂ ಹೊರ ಬರದಂತೆ ಸೂಚನೆ ನೀಡಲಾಗಿದೆ. ಈಗಾಗಲೇ 148 ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಬೇರೆ ಜಿಲ್ಲೆಗಳಿಂದ ಬರುವ ದುಷ್ಕರ್ಮಿಗಳನ್ನು ತಡೆಯಲು 9 ಕಡೆ ಚೆಕ್ ಪೋಸ್ಟ್ ಹಾಕಲಾಗಿದೆ. 19 ಮೊಬೈಲ್ ಗಸ್ತು ವಾಹನ ಹಾಗೂ 22 ಚಿತಾ ವಾಹನಗಳು ನಗರದಾದ್ಯಂತ ಗಸ್ತು ತಿರುಗುತ್ತಿವೆ. ಉಳಿದಂತೆ 3 ಪ್ಯಾಟ್ರೋಲ್ ವಾಹನ ಗಸ್ತು ತಿರುಗುತ್ತಿವೆ. ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ದಾವಣಗೆರೆ ವಲಯದ 1 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.

ಕರ್ಫ್ಯೂ ಮುಂದುವರಿಕೆ:
ಪರಿಸ್ಥಿತಿಯನ್ನು ತಿಳಿಗೊಳಿಸುವುದು ಮತ್ತು ರಾತ್ರಿ ವೇಳೆ ಅಹಿತಕರ ಘಟನೆ ತಪ್ಪಿಸುವ ಸಲುವಾಗಿ ಹಳೆ ಶಿವಮೊಗ್ಗ ಭಾಗದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ದೊಡ್ಡಪೇಟೆ, ಕೋಟೆ ಮತ್ತು ತುಂಗಾ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಾಗಿದೆ. ಅದನ್ನು ಶುಕ್ರವಾರ ರಾತ್ರಿವರೆಗೂ  ಮುಂದುವರಿಕೆ ಮಾಡಲಾಗಿದೆ.

ನೈಟ್ ಬೀಟ್ ಫುಲ್ ಬಿಗಿ
ಗಾಂಧಿ ಬಜಾರ್ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ನೈಟ್ ಬೀಟ್ ಬಿಗಿಗೊಳಿಸಲಾಗಿದೆ. ಗಣಪತಿ ಹಬ್ಬದ ಸಂದರ್ಭ ಕೈಗೊಳ್ಳಲಾಗುತ್ತಿದ್ದ ಮಾದರಿಯಲ್ಲೇ, ನೈಟ್ ಬೀಟ್ ಚೀತಾ ವ್ಯವಸ್ಥೆ ಮಾಡಲಾಗಿದೆ. ಯಾವುದೆ ಅಹಿತಕರ ಘಟನೆ ಸಂಭವಿಸಿದರೂ, ಪೊಲೀಸರು ತಕ್ಷಣಕ್ಕೆ ಸ್ಪಂದಿಸಿ, ಪರಿಸ್ಥಿತಿಯನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಅಂಗಡಿ ಮುಗ್ಗಟ್ಟು ಬಂದ್
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟವಟಿಕೆಗಳು ಬಂದ್ ಆಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ನಗರದ ಬಹುತೇಕ ವಹಿವಾಟು ಕೇಂದ್ರಗಳು, ರಸ್ತೆಗಳು ಬಿಕೋ ಎನ್ನುತ್ತಿವೆ.

ಎಪಿಎಂಸಿ ತರಕಾರಿ ಮಾರುಕಟ್ಟೆ ಕೂಡ ಬಂದ್ ಆಗಿತ್ತು. ಪೊಲೀಸರು ಪ್ರಚಾರ ಮಾಡುವ ಮೂಲಕ ಇಡೀ ಮಾರುಕಟ್ಟೆಯನ್ನೆ ಬಂದ್ ಮಾಡಿದ್ದರು. ಶನಿವಾರ ಕೂಡ ತರಕಾರಿ ಮಾರುಕಟ್ಟೆ ಬಂದ್ ಆಗಲಿದೆ. ಇದರಿಂದ ಹೂ, ತರಕಾರಿ, ಹಣ್ಣು ಮುಂತಾದ ಅಗತ್ಯ ವಸ್ತುಗಳ ಮಾರಾಟ ಮಾಡುವವರು ಮತ್ತು ಚಿಕ್ಕಪುಟ್ಟ ತಿಂಡಿಗಾಡಿ, ಮಾರ್ಕೆಟ್ ಸುತ್ತಮುತ್ತಲ ಟೀ ಅಂಗಡಿಗಳು ಬಂದ್ ಆಗಿದ್ದು ತಮ್ಮ ವ್ಯಾಪಾರಕ್ಕೆ ತೊಂದರೆಯಾಯಿತು ಎಂದು ಪರಿತಪಿಸುವುದು ಕಂಡುಬಂದಿತು.

ನಗರದೊಳಗಿನ ಪೆಟ್ರೋಲ್ ಬಂಕ್‌ಗಳು ಬಂದ್ ಆಗಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು. ಹೊರವಲಯದಲ್ಲಿ ಬಂಕ್‌ಗಳು ತೆರೆದಿದ್ದವು.

ಸಂಚಾರ ವಿರಳ: ನಗರದಿಂದ ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಸಂಚಾರ ವಿರಳವಾಗಿತ್ತು. ಶಿವಮೊಗ್ಗದಿಂದ ಹೊರ ಜಿಲ್ಲೆಗೆ ಹೋಗುವ ಬಸ್ ಗಳನ್ನು ಬೈಪಾಸ್ ಮೂಲಕ ಹೋಗಲು ಕೆಎಸ್ ಆರ್ ಟಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ನಗರ ಸಾರಿಗೆಯನ್ನು ಗುರುವಾರ ಸಂಜೆಯಿಂದಲೇ ಸ್ಥಗಿತಗೊಳಿಸಲಾಗಿದೆ. ನಿಷೇಧಾಜ್ಞೆ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಮೆಡಿಕಲ್, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊರ ಊರುಗಳಿಂದ ಬಂದವರು ಬಸ್ ಸಂಚಾರ ಇಲ್ಲದೆ ಪರದಾಟ ನಡೆಸಿದರು. ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ಮರುಕಳುಹಿಸದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News