ಮುಸ್ಲಿಂ ಗೂಂಡಾಗಳು ಹಲ್ಲೆ ಮಾಡಿದರೆ ಹಿಂದೂ ಸಮಾಜ ಕೈಕಟ್ಟಿ ಕೂರುವುದಿಲ್ಲ ಎಂದ ಸಚಿವ ಈಶ್ವರಪ್ಪ

Update: 2020-12-04 12:50 GMT

ಶಿವಮೊಗ್ಗ, ಡಿ.4: ಮುಸ್ಲಿಂ ಗೂಂಡಾಗಳು ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದರೆ ಹಿಂದೂ ಸಮಾಜ ಕೈಕಟ್ಟಿಕೊಂಡು ಕೂರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಹಲ್ಲೆಗೊಳಗಾದ ಬಜರಂಗದಳದ ಕಾರ್ಯಕರ್ತ ನಾಗೇಶ್ ಆರೋಗ್ಯ ವಿಚಾರಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಜರಂಗದಳ ಯುವಕನ ಮೇಲೆ ಕೆಲವು ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಇದೊಂದು ನಿಯೋಜಿತ ಕೃತ್ಯ. ಕಳೆದ ಒಂದು ವಾರದಿಂದ ನಾಗೇಶ್ ಚಲನವಲನ ಗಮನಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಂ ಯುವಕರ ಮೇಲೆಯೂ ಹಲ್ಲೆ ಆಗಿದೆ ಎಂದು ಕೆಲವರು ನನಗೆ ಪೋನ್ ಮಾಡಿ ತಿಳಿಸಿದ್ದಾರೆ. ಆ್ಯಕ್ಷನ್ ಗೆ ರಿಯಾಕ್ಷನ್ ಆಗಿದೆ ಅಷ್ಟೇ. ಮುಸ್ಲಿಂ ಗೂಂಡಾಗಳು ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದರೆ ಹಿಂದೂ ಸಮಾಜ ಕೈಕಟ್ಟಿಕೊಂಡು ಕೂರುವುದಿಲ್ಲ ಎಂದರು.

ಮುಸ್ಲಿಂ ಗೂಂಡಾಗಳಿಗೆ ಆ ಸಮುದಾಯದ ಮುಖಂಡರು ಬುದ್ದಿ ಹೇಳಬೇಕು. ಬುದ್ದಿ ಹೇಳುವಂತೆ ಮುಖಂಡರಿಗೆ ಎಚ್ಚರಿಕೆ ಕೊಡುತ್ತೇನೆ. ಮುಸ್ಲಿಂ ಗೂಂಡಾಗಳು ಎಚ್ಚೆತ್ತುಕೊಳ್ಳದಿದ್ದರೆ ಸರಕಾರ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.

ಘಟನೆ ಸಂಬಂಧ ಎಸ್ಪಿ, ಐಜಿಪಿ ಜೊತೆ ಚರ್ಚಿಸಿದ್ದೇನೆ. ತಪ್ಪಿತಸ್ಥ ಗೂಂಡಾಗಳನ್ನು ಬಂಧಿಸುವಂತೆ ಸೂಚಿಸಿದ್ದೇನೆ. ಶೀಘ್ರದಲ್ಲಿಯೇ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು, ಕೆಲವು ಮುಸ್ಲಿಂ ಗೂಂಡಾಗಳು ಮಾಡಿದ ಕೃತ್ಯಕ್ಕೆ ಇಡೀ ಶಿವಮೊಗ್ಗ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದರು.

ಎರಡು ಕಡೆ ಗುಂಪು ಘರ್ಷಣೆ ಎಂದು 144 ಸೆಕ್ಷನ್ ಜಾರಿಗೊಳಿಸಿದ್ದ ತಹಶೀಲ್ದಾರ್ ಡಾ. ನಾಗರಾಜ್ ವಿರುದ್ಧ ಗರಂ ಆದ ಸಚಿವರು, ಆ ತಹಶೀಲ್ದಾರ್ ಗೆ ತಲೆ ಸರಿ ಇಲ್ಲ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿಲ್ಲ. ಒಬ್ಬರ ಮೇಲೆಯೇ ಗೂಂಡಾಗಿರಿ ನಡೆಸಲಾಗಿದೆ. ಅಧಿಕಾರಿಯಾಗಿ ಅವರು ಅಂತಹ ಹೇಳಿಕೆ ನೀಡಿರಬಹುದು. ಇಂತಹ ಹೇಳಿಕೆ ನೀಡಿದ ತಹಶೀಲ್ದಾರ್‌ರನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಹಿಂದೂ ಸಮಾಜವನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಒಬ್ಬರ ಮೇಲೆ ನಾಲ್ವರು ಹಲ್ಲೆ ಮಾಡಿರುವುದನ್ನು ಗುಂಪು ಘರ್ಷಣೆ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News