ಸರಗಳ್ಳತನ ಆರೋಪಿ ದಲಿತ ಯುವಕ ಠಾಣೆಯಲ್ಲಿ ಮೃತ್ಯು: ಸಿಬಿಐ ತನಿಖೆಗೆ ದಸಂಸ ಆಗ್ರಹ

Update: 2020-12-04 14:30 GMT

ಬಾಗಲಕೋಟೆ, ಡಿ.4: ಸರಗಳ್ಳತನ ಆರೋಪ ಪ್ರಕರಣ ಸಂಬಂಧ ಕಾರಾಗೃಹ ಸೇರಿದ್ದ ದಲಿತ ಯುವಕನ ಲಾಕಪ್‍ ಡೆತ್ ಆಗಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಿಬಿಐ ತನಿಖೆ ನಡೆಸುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಕಲ್ಲಪ್ಪ ಮಾಂಗ್(21) ಮೃತ ದಲಿತ ಯುವಕ ಎಂದು ಗುರುತಿಸಲಾಗಿದೆ.

ಇಲ್ಲಿನ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ನಿವಾಸಿ ಕಲ್ಲಪ್ಪನನ್ನು ಇತ್ತೀಚಿಗೆ ಮಹಲಿಂಗಪುರ ಠಾಣಾ ಪೊಲೀಸರು ಬಂಧಿಸಿದ್ದರು. ತದನಂತರ, ಜಮಖಂಡಿ ಕಾರಾಗೃಹದಲ್ಲಿದ್ದ ಆತನಿಗೆ ಮೇ 26 ರಂದು ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಚಿಕಿತ್ಸೆಗಾಗಿ ಕಲ್ಲಪ್ಪನನ್ನು ಜಮಖಂಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇದಾದ ಬಳಿಕ ಮರುದಿನವೇ ಉದ್ದೇಶಪೂರ್ವಕವಾಗಿ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ಮೇ 27ರಂದು ಕಲ್ಲಪ್ಪ ಜಿಲ್ಲಾ ಕಾರಾಗೃಹದಲ್ಲಿ ಮೃತಪಟ್ಟಿದ್ದರು. ಆದರೆ, ಕುಟುಂಬಸ್ಥರು ಇದು ಲಾಕಪ್‍ ಡೆತ್ ಆಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದ ಕಾರಣಕ್ಕೆ ಸಾವನ್ನಪ್ಪಿರುವುದಾಗಿ ದೂರಿದ್ದಾರೆ.

ಲಾಕಪ್‍ ಡೆತ್ ಸಂಬಂಧ ಸ್ಥಳೀಯ ಪೊಲೀಸರನ್ನು ಅಮಾನತು ಮಾಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಮುಂದೆ ಜಿಲ್ಲಾ ಕಾರಾಗೃಹದ ಮುಂದೆ ಅರೆಬೆತ್ತಲೆ, ಪ್ರತಿಭಟನೆ ನಡೆಸುವುದಾಗಿ ದಸಂಸ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News