ಕುರುಬರ ಎಸ್ಟಿ ಮೀಸಲಾತಿ ಹೋರಾಟ: 'ನಮ್ಮೆಲ್ಲರ ನಾಯಕ ಸಿದ್ದರಾಮಯ್ಯ ನೇತೃತ್ವ ವಹಿಸಲಿ' ಎಂದ ಎಚ್.ವಿಶ್ವನಾಥ್

Update: 2020-12-04 16:04 GMT

ಮೈಸೂರು,ಡಿ.4: ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡುತ್ತಿರುವುದರ ಹಿಂದೆ ಯಾವುದೇ ರಾಜಕೀಯವಿಲ್ಲ. ಇದರ ನೇತೃತ್ವವನ್ನು ನಮ್ಮೆಲ್ಲರ ನಾಯಕರಾದ ಸಿದ್ದರಾಮಯ್ಯನವರೇ ವಹಿಸಿಕೊಳ್ಳಲಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂಬುದು ಇಂದಿನ ಹೋರಾಟವಲ್ಲ. ಈ ಹಿಂದೆಯೂ ನಡೆದಿದೆ. ಇದರಲ್ಲಿ ಆರೆಸ್ಸೆಸ್ ಅವರದಾಗಲಿ ಬಿಜೆಪಿ ಅವರದಾಗಲಿ ಕೈವಾಡ ಇಲ್ಲ. ಸಮುದಾಯದ ಏಳಿಗೆಗಾಗಿ ಈ ಹೋರಾಟ ಮಾಡಲಾಗುತ್ತಿದೆ. ಸಮುದಾಯದ ಬೆಂಬಲ ಪಡೆದು ಇಷ್ಟೊಂದು ದೊಡ್ಡ ಎತ್ತರಕ್ಕೆ ಬೆಳೆದ ಸಿದ್ದರಾಮಯ್ಯ ನವರೇ ಇದರ ನೇತೃತ್ವ ವಹಿಸಲಿ. ಅವರ ಹಿಂದೆ ನಾವೆಲ್ಲರೂ ಹೋಗಲು ಸಿದ್ಧ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಇಡೀ ಕುರುಬ ಸಮುದಾಯ ಅವರ ಬೆಂಬಲಕ್ಕೆ ನಿಂತುಕೊಂಡಿತ್ತು. ಇತರ ಸಮುದಾಯಗಳೊಡಗೂಡಿ ರಾಜ್ಯದ ಮುಖ್ಯಮಂತ್ರಿಯೂ ಆದರು. ಈಗ ಸಮುದಾಯದವರ ಏಳಿಗೆಗೆ ಶ್ರಮಿಸಬೇಕಾಗಿರುವುದು ಸಿದ್ದರಾಮಯ್ಯ ಅವರ ಕರ್ತವ್ಯ. ಹಾಗಾಗಿ ಸಿದ್ದರಾಮಯ್ಯ ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಮುಂಚೂಣಿ ವಹಿಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಲು ನಮ್ಮ ಸಮುದಾಯ ಎಲ್ಲವನ್ನೂ ಕೊಟ್ಟಿದೆ. ಅದೇ ಸಮುದಾಯಕ್ಕೆ ಹೋರಾಟ ಯಾಕೆ ಅಂತೀರಲ್ಲ. ಬಹುಶಃ ನೀವು ಹೋರಾಟ ಮಾಡಿಲ್ಲ ಅನ್ನಿಸುತ್ತದೆ. ನೀವು ಮಾರ್ಗದರ್ಶನ ಮಾಡಿದರೆ ಈ ಹೋರಾಟ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು. ಆದರೆ ನೀವು ಹೋರಾಟವೇ ಬೇಡ ಅಂತ ಹೇಳೋದು ಎಷ್ಟು ಸರಿ. ಕನಕಗೋಪುರ ಬಿದ್ದಾಗ, ಮಠ ಕಟ್ಟಿದಾಗ ನೀವು ಇರಲಿಲ್ಲ. ಮಠ ಕಟ್ಟೋದು ಅಷ್ಟು ಸುಲಭ ಅಲ್ಲ. ಕಾಗಿನೆಲೆ ಮಹಾಸಂಸ್ಥಾಪಕ ಅಧ್ಯಕ್ಷ ನಾನೇ ಆಗಿದ್ದೇನೆ. ಆಗೆಲ್ಲ ನೀವು ಬರದಿದ್ದರೂ ನಿಮ್ಮ ಹೆಸರು ಹಾಕಿತ್ತು. ನೀವು ಹೋರಾಟಕ್ಕೆ ಬೆಂಬಲ ಸೂಚಿಸಬೇಕಿತ್ತು ಎಂದರು.

ನೀವು ಮುಖ್ಯಮಂತ್ರಿಯಾಗಿದ್ದ ವೇಳೆ ದೇಶದಲ್ಲಿ ಯಾರೂ ಮಾಡದ ಸಾಹಸಕ್ಕೆ ಕೈ ಹಾಕಿದ್ದೀರಿ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದೀರಿ. ಆ ಸಮಿಕ್ಷೆ ವರದಿ ಚರ್ಚೆಗೆ ಬಂದಿದ್ದರೆ ನೀವು ಮತ್ತೆ ಮುಖ್ಯಮಂತ್ರಿ ಆಗುತ್ತಿದ್ದಿರೇನೊ, ಇರಲಿ ಅದೆಲ್ಲವೂ ಮುಗಿದಿದೆ. ಆದರೆ ಕುರುಬ ಸಮುದಾಯ ಎಸ್ಟಿಗೆ ಸೇರುವ ಹೋರಾಟ ಇನ್ನೂ ಕಠಿಣವಾಗಿ ಆಗಬೇಕಿದೆ. ಅದಕ್ಕಾಗಿ ನಿಮ್ಮ ಸಹಕಾರ ಹಾಗೂ ಬೆಂಬಲ ಬೇಕು. ನಮ್ಮ ಜೊತೆ ಹೋರಾಟಕ್ಕೆ ಬನ್ನಿ ಎಂದು ಬಹಿರಂಗವಾಗಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದರು.

ಏಕವಚನದಲ್ಲಿ ಮಾತನಾಡುವುದನ್ನು ಬಿಡಿ: ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡುವುದನ್ನು ಬಿಡಿ. ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ. ಮುಂದಾದರೂ ಎಲ್ಲರನ್ನು ಬಹುವಚನದಲ್ಲಿ ಮಾತನಾಡಿಸಿ. ದೇವಾರಾಜ್ ಅರಸ್ ಅವರಂತೆ ಎಲ್ಲರನ್ನೂ ಗೌರವಿಸೋದು ಕಲಿಯಿರಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.

5 ಲಕ್ಷ ರೂ.: ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮತ್ತು ಬಿ.ಆರ್.ಸಂತೋಷ್ ಉಪಚುನಾವಣೆ ಸಮಯದಲ್ಲಿ ಹಣ ನೀಡದೆ ವಂಚಿಸಿದ್ದರು ಎಂದು ಹೇಳಿದ್ದು ನಿಜ. ದೊಡ್ಡ ಮೊತ್ತ ಅಂದರೆ 5 ಲಕ್ಷ ರೂ. ಎಂದು ವಿಶ್ವನಾಥ್ ಹೇಳಿದರು.

ನನ್ನ ಮಟ್ಟಕ್ಕೆ ದೊಡ್ಡ ಮೊತ್ತ ಎಂದರೆ 5 ಲಕ್ಷ. ನೀವು ಮುಖ್ಯಮಂತ್ರಿ ಆಗಿದ್ದವರು ಹಾಗಾಗಿ ನಿಮಗೆ ಕೋಟ್ಯಂತರ ರೂ ದೊಡ್ಡ ಮೊತ್ತ ಇರಬೇಕು. ನನಗೆ ಇದೇ ದೊಡ್ಡ ಮೊತ್ತ. ಅದನ್ನು ಯೋಗೇಶ್ವರ್ ಮತ್ತು ಬಿ.ಆರ್.ಸಂತೋಷ್ ತೆಗೆದುಕೊಂಡು ಹೋದರು ಎಂದು ಈಗಲೂ ಹೇಳುತ್ತೇನೆ. ನೀವು ಜಿ.ಟಿ.ದೇವೇಗೌಡರಿಗೆ ಹಣ ಕೊಟ್ಟಿದ್ದೇವೆ ಎಂದು ಹೇಳಿದರಲ್ಲ. ಅದು ಯಾವ ಹಣ, ಬ್ಲಾಕ್ ಮನಿಯೊ ವೈಟ್ ಮನಿಯೋ ಎಷ್ಟು ಕೋಟಿ ಎಂದು ನೀವು ಬಹಿರಂಗ ಪಡಿಸಿ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ತಪ್ಪು
ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ತಪ್ಪು ಎಂದ ವಿಶ್ವನಾಥ್, ನಾಳಿನ ಬಂದ್ ಕರೆ ವಿಚಾರ ಏನೇ ಇರಲಿ. ಮರಾಠ ಪ್ರಾಧಿಕಾರ ಮಾಡಿದ್ದು ತಪ್ಪು. ಭಾಷೆಗಾಗಿ ಗಡಿಯಲ್ಲಿ ಹೋರಾಟ ಆಗುತ್ತಿದೆ. ಹಾಗಂತ ಭಾಷೆಗೊಂದು ಪ್ರಾಧಿಕಾರ ಮಾಡೋಕೆ ಆಗುತ್ತಾ? ನಾಳೆ ಮತ್ತೊಂದು ಭಾಷೆಯವರು ಒತ್ತಾಯ ಮಾಡಿದರೆ ಏನ್ ಮಾಡೋದು. ನಾನು ಕನ್ನಡ ಹೋರಾಟದಿಂದ ಬಂದವನು. ನನಗೆ ಭಾಷೆ ಬಗ್ಗೆ ಅಭಿಮಾನ ಇದೆ. ಹಾಗಾಗಿ ಮರಾಠ ಪ್ರಾಧಿಕಾರ ಮಾಡಿದ್ದನ್ನು ನಾನು ಒಪ್ಪಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News