ಜಾಮೀನು ಕೋರಿ ನಟಿ ಸಂಜನಾ ಅರ್ಜಿ ಸಲ್ಲಿಕೆ: ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2020-12-04 16:55 GMT

ಬೆಂಗಳೂರು, ಡಿ.4: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಡಿ.7ಕ್ಕೆ ಕಾಯ್ದಿರಿಸಿದೆ.

ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ನಟಿ ಸಂಜನಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಆರೋಪಿ ನಟಿ ಪರ ವಾದಿಸಿದ ಹಿರಿಯ ವಕೀಲ ಹಸ್ಮತ್ ಪಾಷಾ ಅವರು, ಸಂಜನಾಗೆ ಅನಾರೋಗ್ಯ ಸಮಸ್ಯೆ ಇದೆ. 2018ರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿದ್ದರು. 2019ರಿಂದ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಚಳಿಗಾಲದಲ್ಲಿ ಸಮಸ್ಯೆ ಉಲ್ಬಣಿಸಲಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ, ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ಎಸ್‍ಪಿಪಿ ವೀರಣ್ಣ ತಿಗಡಿ ಅವರು, ಆರೋಪಿಗೆ ಈಗಾಗಲೇ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಜಾಮೀನು ತಿರಸ್ಕರಿಸಿವೆ. ಆಗಲೂ ಅನಾರೋಗ್ಯ ನೆಪ ಒಡ್ಡಿದ್ದರು. ಸೂಕ್ತ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಬಹುದು. ಅದಕ್ಕಾಗಿ ಜಾಮೀನು ನೀಡಬಾರದು. ಜಾಮೀನು ನೀಡಿದರೆ ಆರೋಪಿ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದರು.

ವಕೀಲರ ವಾದ ಆಲಿಸಿದ ಪೀಠ, ಆರೋಪಿಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಅರ್ಜಿ ಸಂಬಂಧ ಡಿ.7 ರಂದು ತೀರ್ಪು ನೀಡಲಾಗುವುದು ಎಂದು ತಿಳಿಸಿತು. ನಟಿ ಸಂಜನಾ ಈ ಬಾರಿ ಅನಾರೋಗ್ಯವನ್ನೇ ಕಾರಣವಾಗಿಟ್ಟುಕೊಂಡು ಜಾಮೀನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News