ರೈತರ ಹೋರಾಟಕ್ಕೆ ಸ್ಪಂದಿಸಿ ಪ್ರಧಾನಿ ಕೃಷಿ ಮಸೂದೆಗಳನ್ನು ರದ್ದುಪಡಿಸಲಿ: ಕುಮಾರಸ್ವಾಮಿ ಒತ್ತಾಯ

Update: 2020-12-04 17:42 GMT
File Photo

ಮಂಡ್ಯ, ಡಿ.4: ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹೋರಾಟಕ್ಕೆ ಸ್ಪಂದಿಸಿ ಕೂಡಲೇ ಹೊಸ ಕೃಷಿ ಮಸೂದೆಗಳನ್ನು ರದ್ದುಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉದ್ದಾರ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಬಸವಕಲ್ಯಾಣದಲ್ಲಿ ನಾವು ಮೂರು ಬಾರಿ ಗೆದ್ದಿದ್ದೇವೆ. ಅಲ್ಲಿ ನಮ್ಮದೇ ಆದ ಅಸ್ತಿತ್ವ ಇದೆ. ಸಭೆ ನಡೆಸಿ ಅಭ್ಯರ್ಥಿ ಹಾಕೋದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.

ಮೈಷುಗರ್ ಸರಕಾರಿ ಸ್ವಾಮ್ಯದಲ್ಲಿ ಉಳಿಸಬೇಕೆಂದು ರೈತ ಮುಖಂಡರು ಕೋರಿದ್ದು, ಸಿಎಂ ಭೇಟಿಯಾಗಿ ಮಾತನಾಡುತ್ತೇನೆ. ಮೈಷುಗರ್ ಗೆ ನನ್ನ ಸರಕಾರ ನೂರು ಕೋಟಿ ಅನುದಾನ ನೀಡಿತ್ತು. ಆದರೆ, ಬಿಜೆಪಿ ಸರಕಾರ ವಾಪಸ್ ಪಡೆದಿದೆ. ಚಲುವರಾಯಸ್ವಾಮಿ ತಿಳಿದು ಮಾತನಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.

ನಿಖಿಲ್ ಚುನಾವಣೆಯಲ್ಲಿ ಮಂಡ್ಯ ಜನ ಮೋಸ ಮಾಡಲಿಲ್ಲ. ಬದಲಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಎಲ್ಲರೂ ಸೇರಿ ನಮ್ಮನ್ನು ಮುಗಿಸುವ ಪ್ಲಾನ್ ಮಾಡಿ ಸೋಲಿಸಿದರು. ನಿಖಿಲ್ ಈಗ ಸೋತಿರಬಹುದು, ಮುಂದೆ ಮಂಡ್ಯ ಜನರೇ ಒಪ್ಪಿ ಲೋಕಸಭೆಗೆ ಹೋಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಸಚಿವ ನಾರಾಯಣಗೌಡ ಕಾರ್ಯವೈಖರಿಗೂ ಎಚ್ಡಿಕೆ ಆಕ್ಷೇಪ ವ್ಯಕ್ತಪಡಿಸಿ, ಈತ ಸಚಿವನಾಗಿ ಏನ್ ಕಿತ್ತು ಗುಡ್ಡೆಹಾಕಿದ್ದಾನೆ. ನಾನು ಸಿಎಂ ಆಗಿದ್ದಾಗ ಹಣ ಬಿಡುಗಡೆ ಮಾಡಿ ಕೆಲಸ ಆರಂಭ ಮಾಡಿದ್ದೆವು. ನನ್ನ ಮತ್ತು ನಮ್ಮ‌ ಕುಟುಂಬದ ಬಗ್ಗೆ ಮಾತಾಡುವ ಹಂತಕ್ಕೆ ಆತ ಬಂದಿದ್ದಾನೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಹೇಳ್ತಾರೆ ಜೆಡಿಎಸ್ ನಂಬಿ ಹಾಳಾದೆವು ಎಂದು. ಮಂಡ್ಯದಲ್ಲಿ ಯಾರ ನಂಬಿ ಹಾಳಾದೆವು ಅನ್ನೋದು ನಮಗೆ ಗೊತ್ತು. ಕಾಂಗ್ರೆಸ್ ನವರು ಬಿಜೆಪಿ ಜೊತೆ ಎಷ್ಟೋ ಸ್ಥಳೀಯ ಸಂಸ್ಥೆಗಳಲ್ಲಿ‌ ಒಂದಾಗಿದ್ದಾರೆ. ಯಾರೂ ಸ್ವಚ್ಚವಾಗಿ ರಾಜಕಾರಣ ಮಾಡುತ್ತಿಲ್ಲ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News