ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?

Update: 2020-12-05 05:55 GMT

ಉಳ್ಳಾಲ ನೇತ್ರಾವತಿ ಸೇತುವೆ ದಕ್ಷಿಣ ಕನ್ನಡ ಜಿಲ್ಲೆಯ ಅತಿ ಉದ್ದದ ಸೇತುವೆಯೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಈ ಸೇತುವೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ ಹೆಗ್ಡೆ ಇಲ್ಲಿಂದ ಆತ್ಮಹತ್ಯೆ ಮಾಡಿಕೊಂಡಾಗ. ಈ ಮೊದಲೂ ಹಲವು ಯುವಕರು, ಮಹಿಳೆಯರು ಇದೇ ಸೇತುವೆಯಿಂದ ಹಾರಿ ಪ್ರಾಣ ಬಿಟ್ಟ ಉದಾಹರಣೆಗಳಿದ್ದರೂ, ಸಿದ್ಧಾರ್ಥ ಹೆಗ್ಡೆಯವರ ಆತ್ಮಹತ್ಯೆಯ ಬಳಿಕ ಈ ಸೇತುವೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಈ ಸೇತುವೆಯೇ ಆತ್ಮಹತ್ಯೆಗಳಿಗೆ ಕಾರಣ ಎನ್ನುವುದನ್ನು ಅಧಿಕಾರಿಗಳಿಗೆ ಯಾರು ಮಾಹಿತಿ ನೀಡಿದರೋ, ಕೊನೆಗೆ ಈ ಸೇತುವೆಯ ಇಕ್ಕೆಡೆಗಳಲ್ಲಿ ನದಿಗೆ ಹಾರದಂತೆ ತಡೆ ಬೇಲಿಯನ್ನು ಹಾಕಲಾಯಿತು. ಈ ಮೂಲಕ ‘ಆತ್ಮಹತ್ಯೆಯನ್ನು ತಡೆಯಲು ಬೇಲಿ ಹಾಕಲ್ಪಟ್ಟ ಮೊದಲ ಸೇತುವೆ’ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಸೇತುವೆಗಳಿಗೆ ಇಕ್ಕೆಡೆಗಳಲ್ಲಿ ತಡೆಗಳಿಲ್ಲದಿದ್ದರೆ ಅಪಘಾತ ಸಂಭವಿಸದಂತೆ ಬೇಲಿ ಹಾಕುವುದು ಸರಿಯಾದ ಕ್ರಮ. ಆದರೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಬೇಲಿ ಹಾಕಿದರೆ? ಸೇತುವೆಯನ್ನು ನೋಡಿದಾಕ್ಷಣ ಯಾರಿಗಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಮನಸ್ಸಾಗುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆಯೇ? ಕರಾವಳಿಯ ಉದ್ದಕ್ಕೂ ವಿಶಾಲ ಕಡಲೇ ಇದೆ. ಕಡಲಿಗೆ ಹಾರಿ ಆತ್ಮಹತ್ಯೆಗೈಯುತ್ತಾರೆ ಎಂದು ಕಡಲಿಗೆ ಬೇಲಿ ಹಾಕಲು ಸಾಧ್ಯವಿದೆಯೇ? ಆತ್ಮಹತ್ಯೆಗಳಿಗೆ ಸಾವಿರ ದಾರಿಗಳಿವೆ. ಒಂದು ವೇಳೆ ಒಬ್ಬಾತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರೆ ಸೇತುವೆಯ ಬೇಲಿ ಆತನನ್ನು ಉಳಿಸಲಾರದು. ಇಂತಹ ಬೇಲಿಗಳಿಂದ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಯುವಕರು, ರೈತರು, ಉದ್ಯಮಿಗಳಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚುತ್ತಿದೆ. ಈ ಆತ್ಮಹತ್ಯೆಗಳಿಗೆ ಕಾರಣವೇನು ಎನ್ನುವುದನ್ನು ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದೇ ಆತ್ಮಹತ್ಯೆಗಳನ್ನು ತಡೆಯಲು ಸರಕಾರದ ಮುಂದಿರುವ ಏಕೈಕ ದಾರಿ. ಹೆಚ್ಚುತ್ತಿರುವ ಆರ್ಥಿಕ ಸಂಕಷ್ಟಗಳು ಹಲವರನ್ನು ನಡುಬೀದಿಗೆ ತಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಅವರನ್ನು ಸಂಕಟಗಳಿಂದ ಮೇಲೆತ್ತಲು ಯೋಜನೆಗಳನ್ನು ರೂಪಿಸುವುದೇ ಆತ್ಮಹತ್ಯೆ ತಡೆಯುವುದಕ್ಕೆ ಸರಕಾರ ನಿರ್ಮಿಸಬಹುದಾದ ನಿಜವಾದ ಬೇಲಿಯಾಗಿದೆ.

 ಆತ್ಮಹತ್ಯೆಯ ಕುರಿತಂತೆ ಕೃಷಿ ಸಚಿವ ಬಿ. ಸಿ . ಪಾಟೀಲ್ ನೀಡಿರುವ ಹೇಳಿಕೆ ಇದೀಗ ವಿವಾದವಾಗಿದೆ. ‘‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’’ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಿಗೇ ಅದರ ವಿರುದ್ಧ ವಿವಿಧ ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ. ಕ್ಷಮೆ ಯಾಚಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಹೇಳಿಕೆ ಮಾಧ್ಯಮಗಳಲ್ಲಿ ವಿವಾದವಾಗುತ್ತಿರುವುದನ್ನು ಕಂಡ ಕೃಷಿ ಸಚಿವರು ‘‘ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೆ’’ ಎಂದು ಸ್ಪಷ್ಟೀಕರಣ ನೀಡಿದರು. ಈ ಎರಡೂ ಹೇಳಿಕೆಗಳ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಇಲ್ಲ. ಕೃಷಿಕರ ಆತ್ಮಹತ್ಯೆಯನ್ನು ಉಲ್ಲೇಖಿಸಿ ಮಾತನಾಡಿರುವ ಕಾರಣ ‘ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು’ ಎನ್ನುವುದೂ ಪರೋಕ್ಷವಾಗಿ ಕೃಷಿಕರನ್ನೇ ಹೇಡಿಗಳೆಂದು ಸಾರುತ್ತದೆ. ಇತರ ಆತ್ಮಹತ್ಯೆಗಳಿಗೂ ರೈತರ ಆತ್ಮಹತ್ಯೆಗಳಿಗೂ ವ್ಯತ್ಯಾಸವಿದೆ ಎನ್ನುವ ಸೂಕ್ಷ್ಮವನ್ನು ಕೃಷಿ ಸಚಿವರು ಅರ್ಥಮಾಡಿಕೊಳ್ಳದೇ ಇದ್ದರೆ, ‘ರೈತರ ಆತ್ಮಹತ್ಯೆ’ಗಳಿಗೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬಲ್ಲರು? ಕುಡಿತ, ಆರ್ಥಿಕ ಅಡಚಣೆ, ಖಿನ್ನತೆ ಇತ್ಯಾದಿಗಳೇ ಆತ್ಮಹತ್ಯೆಗಳಿಗೆ ಮುಖ್ಯ ಕಾರಣಗಳು.

ಆದರೆ ರೈತರ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವುದು ಆರ್ಥಿಕ ಅಡಚಣೆಯೇ ಆಗಿದ್ದರೂ ಅದಕ್ಕೆ ಕಾರಣ ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಇರುವುದು. ಬರ, ನೆರೆ ಇತ್ಯಾದಿಗಳಿಂದಾಗಿ ಆರ್ಥಿಕ ನಷ್ಟಕ್ಕೊಳಗಾಗಿ, ಮಾಡಿದ ಸಾಲವನ್ನು ತೀರಿಸಲಾಗದೆ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮಾಧ್ಯಮಗಳು ಮಾತನಾಡುತ್ತಿರುವುದೂ ಇಂತಹ ರೈತರ ಕುರಿತಂತೆ. ಅವರ್ಯಾರೂ ಹೇಡಿಗಳಲ್ಲ. ಬ್ಯಾಂಕುಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಗಳಿಗೆ ಪರಾರಿಯಾಗಿ ಅಲ್ಲಿ ಯಾವ ನಾಚಿಕೆಯೂ ಇಲ್ಲದೆ ಜೀವನ ನಡೆಸುತ್ತಿರುವ ಕಾರ್ಪೊರೇಟ್ ಕುಳಗಳಂತೆ ಈ ರೈತರು ನಾಚಿಕೆ ಗೆಟ್ಟವರಲ್ಲ. ಆತ್ಮಹತ್ಯೆಗೈದಿಲ್ಲ ಎನ್ನುವ ಕಾರಣಕ್ಕಾಗಿ ಈ ಕಾರ್ಪೊರೇಟ್ ಕುಳವನ್ನು ‘ಧೈರ್ಯವಂತರು’ ಎಂದು ಕರೆಯಲಾದೀತೆ? ಬ್ಯಾಂಕುಗಳನ್ನು ಮುಳುಗಿಸಿ ಬೃಹತ್ ಉದ್ಯಮಿಗಳು ಈಗಲೂ ಸಮಾಜದಲ್ಲಿ ಗಣ್ಯರಂತೆಯೇ ಬದುಕುತ್ತಿದ್ದಾರೆ. ಆದರೆ ರೈತರಿಗೆ ಹಾಗೆ ಬದುಕುವ ಅವಕಾಶವನ್ನು ಸಮಾಜ ನೀಡುವುದಿಲ್ಲ. ಬ್ಯಾಂಕಿನಿಂದಲೋ, ಫೈನಾನ್ಸ್ ನಿಂದಲೋ, ಬಡ್ಡಿ ವ್ಯಾಪಾರಿಗಳಿಂದಲೋ ಸಾಲ ಮಾಡಿ, ಬೀಜ ಬಿತ್ತಿ ಬೆಳೆ ತೆಗೆದು ರೈತರು ನಷ್ಟಕ್ಕೊಳಗಾದರೆ ತಕ್ಷಣ ಅವರ ನೆರವಿಗೆ ಸರಕಾರ ಧಾವಿಸಬೇಕು. ಇಲ್ಲವಾದರೆ ಇವರ ಮನೆಮಠಗಳನ್ನು ಬಡ್ಡಿ ವ್ಯಾಪಾರಿಗಳು ವಶಕ್ಕೆ ತೆಗೆದುಕೊಳ್ಳುತ್ತಾರೆ ಅಥವಾ ಸಾಲ ಕಟ್ಟದ ರೈತ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗುತ್ತಾನೆ. ಕೊನೆಗೆ ‘ಈ ರೀತಿ ಬದುಕುವುದಕ್ಕಿಂತ ಸಾಯುವುದೇ ಲೇಸು’ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಆತ್ಮಹತ್ಯೆಗೈಯುವ ರೈತರನ್ನು ದೂಷಿಸುವ ಬದಲು, ಅವರನ್ನು ಆ ಸ್ಥಿತಿಗೆ ತಂದವರು ಯಾರು? ಅವರ ವಿರುದ್ಧ ಕೃಷಿ ಸಚಿವರು ಮಾತನಾಡಬೇಕು. ಈಗಲೂ ರೈತರು ಬಡ್ಡಿ ಲೇವಾದೇವಿಗಾರರ ಹಿಡಿತದಲ್ಲಿದ್ದಾರೆ. ಬ್ಯಾಂಕುಗಳಿಂದ ಸಾಲ ಪಡೆಯಬೇಕಾದರೆ ಪದೇ ಪದೇ ಅಲೆದಾಡಬೇಕು. ಆ ದಾಖಲೆ, ಈ ನಿಯಮ ಎಂದು ಒದ್ದಾಡಬೇಕು. ಅಷ್ಟು ಹೊತ್ತಿಗೆ ಮುಂಗಾರು ಹೊರಟು ಬಿಡುತ್ತದೆ. ಆದುದರಿಂದ ತುರ್ತಾಗಿ ಸ್ಥಳೀಯ ಬಡ್ಡಿ ವ್ಯಾಪಾರಿಗಳಿಂದ ಅಥವಾ ಫೈನಾನ್ಸ್‌ಗಳಿಂದ ಸಾಲ ಮಾಡುವುದು ರೈತರಿಗೆ ಅನಿವಾರ್ಯವಾಗಿ ಬಿಡುತ್ತದೆ. ಆದರೆ ಕೃಷಿಯೇನಾದರೂ ಕೈ ಕೊಟ್ಟರೆ ಇವರ ಸ್ಥಿತಿ ಅತ್ಯಂತ ಹೀನಾಯವಾಗಿ ಬಿಡುತ್ತದೆ. ಬಡ್ಡಿ ವ್ಯಾಪಾರಿಗಳಿಗೆ ಅವರದೇ ವೃತ್ತಿಪರ ಗೂಂಡಾಗಳಿರುತ್ತಾರೆ. ಫೈನಾನ್ಸ್‌ಗಳೂ ಇದಕ್ಕೆ ಹೊರತಲ್ಲ. ಬಡ್ಡಿ ಚಕ್ರಬಡ್ಡಿಯಾಗಿ ಪಡೆದ ಸಾಲ ಹಲವು ಪಟ್ಟು ಹೆಚ್ಚಳವಾಗಿ ಅಂತಿಮವಾಗಿ ಮನೆ, ಗದ್ದೆಗಳನ್ನೇ ಅವರಿಗೆ ಒಪ್ಪಿಸಿ ಬೀದಿಪಾಲಾಗಬೇಕು.

ಇಂತಹ ಸಂದರ್ಭದಲ್ಲಿ ಅವರು ಧೈರ್ಯವನ್ನು ಪ್ರದರ್ಶಿಸಬೇಕಾದರೆ ಸರಕಾರ ಅವರ ಜೊತೆಗೆ ನಿಲ್ಲಬೇಕು. ತನ್ನ ಹೊಣೆಗಾರಿಕೆಯನ್ನು ಸರಕಾರ ಎಷ್ಟರ ಮಟ್ಟಿಗೆ ನಿಭಾಯಿಸಿದೆ ಎನ್ನುವುದರ ವಿವರವನ್ನು ಕೃಷಿಸಚಿವರು ನಾಡಿನ ಜನತೆಗೆ ನೀಡಬೇಕಾಗಿದೆ. ಇಂದು ಸರಕಾರದ ರೈತ ವಿರೋಧಿ ನೀತಿಗಳೇ ಅವರನ್ನು ಆತ್ಮಹತ್ಯೆಗಳ ಕಡೆಗೆ ಮುನ್ನಡೆಸುತ್ತಿವೆ. ಸರಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧ ಪಂಜಾಬ್‌ನ ಸಾವಿರಾರು ರೈತರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಗಲೂರಾತ್ರಿ ಅವರು ನಡೆಸುತ್ತಿರುವ ಹೋರಾಟವೇ ಅವರು ಹೇಡಿಗಳಲ್ಲ ಧೈರ್ಯವಂತರು ಎನ್ನುವುದಕ್ಕೆ ಸಾಕ್ಷಿ. ನಿಜಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದಾದರೆ, ಅವರ ಬೇಡಿಕೆಗಳಿಗೆ ಸರಕಾರ ಮೊದಲು ಕಿವಿಯಾಗಬೇಕು. ಕೃಷಿ ಸಚಿವರು ಉಚಿತ ಬೋಧನೆಗಳನ್ನು ನೀಡುವ ಬದಲು ರೈತರ ಸಮಸ್ಯೆಗಳನ್ನು ಆಲಿಸಿ, ಅದನ್ನು ಬಗೆಹರಿಸುವ ಕಡೆಗೆ ಗಮನ ಹರಿಸಲಿ. ಹಾಗೆಯೇ, ದಿಲ್ಲಿಯಲ್ಲಿ ನೆರೆದ ರೈತರನ್ನು ಖಾಲಿಸ್ತಾನಿಗಳು, ನಕ್ಸಲೀಯರು ಎಂದು ಕರೆಯುತ್ತಿರುವ ತಮ್ಮದೇ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳಲಿ. ಯಾಕೆಂದರೆ, ಆ ರೈತರು ದಿಲ್ಲಿಯಲ್ಲಿ ನೆರೆದಿರುವುದು ‘ಭವಿಷ್ಯದಲ್ಲಿ ನಾವೆಂದೂ ಆತ್ಮಹತ್ಯೆ ಮಾಡಿಕೊಳ್ಳುವ ದಿನಗಳು ಬರಬಾರದು’ ಎಂಬ ಸದುದ್ದೇಶದೊಂದಿಗೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News