ಹವಾಮಾನ ವೈಪರೀತ್ಯ: ಚಿಕ್ಕಮಗಳೂರು ಜಿಲ್ಲಾದ್ಯಂತ ಮೋಡಕವಿದ ವಾತಾವರಣ

Update: 2020-12-04 18:14 GMT

ಚಿಕ್ಕಮಗಳೂರು, ಡಿ.4: ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದರೆ ಕಾಫಿನಾಡಿನಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸದ್ಯ ಕಾಫಿ, ಅಡಿಕೆ, ಭತ್ತ ಕಟಾವಿನಂತಹ ಕೃಷಿ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಈ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.

ದೇಶದ ವಿವಿಧ ರಾಜ್ಯಗಳ ಕರಾವಳಿ ತೀರದಲ್ಲಿ ಸೈಕ್ಲೋನ್ ಎದ್ದಿರುವ ಪರಿಣಾಮ ಮಲೆನಾಡು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ, ಸಾಧಾರಣ ಮಳೆ ಸುರಿಯಲಾರಂಭಿಸಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಇದರ ಪರಿಣಾಮ ಎದುರಾಗಿದ್ದು, ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಬೆಳಗಿನಿಂದ ಸಂಜೆವರೆಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಈ ಹವಾಮಾನ ವೈಪರೀತ್ಯ ಜಿಲ್ಲೆಯ ಕಾಫಿ, ಅಡಿಕೆ, ಭತ್ತದ ಕೃಷಿಕರಲ್ಲಿ ಭಾರೀ ಆತಂಕ ಮೂಡಿಸಿದ್ದು, ಕೃಷಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡಿದೆ.

ಕಳೆದೊಂದು ತಿಂಗಳಿನಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ, ಭತ್ತದ ಕಟಾವು ಆರಂಭವಾಗಿದ್ದು, ಈ ಕೃಷಿ ಚಟುವಟಿಕೆಗಳು ಬರದಿಂದ ನಡೆಯುತ್ತಿದೆ. ಜಿಲ್ಲೆಯಲ್ಲಿರುವ ಕಾಫಿ ಬೆಳೆಗಾರರು ಕಾರ್ಮಿಕರ ಕೊರತೆಯ ಸಮಸ್ಯೆಯ ನಡುವೆಯೂ ಲಭ್ಯ ಇರುವ ಕಾರ್ಮಿಕರಿಂದ ಕಾಫಿ ಕಟಾವು ಮಾಡಿಸುತ್ತಿದ್ದು, ಕಟಾವು ಮಾಡಿದ ಕಾಫಿ ಹಾಗೂ ಪಲ್ಪರ್ ಮಾಡಿದ ಕಾಫಿಯನ್ನು ಒಣಗಿಸುವ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಇನ್ನು ಅಡಿಕೆ ಬೆಳೆಗಾರರೂ ಅಡಿಕೆ ಕಟಾವಿನಲ್ಲಿ ನಿರತರಾಗಿದ್ದು, ಕಟಾವು ಮಾಡಿದ ಅಡಿಕೆಯನ್ನು ಸಂಸ್ಕರಣೆ ಮಾಡಲು ಬಿಸಿಲು ಅತ್ಯಗತ್ಯವಾಗಿದೆ ಆದರೆ ಸದ್ಯ ಜಿಲ್ಲೆಯಾದ್ಯಂತ ಆವರಿಸಿದರು ಮೋಡದ ವಾತಾವರಣದಿಂದಾಗಿ ಕಾಫಿ ಹಾಗೂ ಅಡಿಕೆ ಸಂಸ್ಕರಣೆಗೆ ಭಾರೀ ತೊಂದರೆಯಾಗಿದ್ದು, ಬಿಸಿಲು ಮಾಯವಾಗಿರುವುದರಿಂದ ಕಟಾವು ಮಾಡಿರುವ ಕಾಫಿ, ಪಲ್ಪರ್ ಮಾರಿರುವ ಕಾಫಿ ಬೀಜ ಒಣಗಿಸಲು ಸಾಧ್ಯವಾಗದೇ ಕೊಳೆತು ಹೋಗುವ ಭೀತಿ ಕಾಫಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಅಡಿಕೆ ಬೆಳೆಗಾರರ ಆತಂಕವೂ ಇದೆ ಆಗಿದೆ.

ಇದರೊಂದಿಗೆ ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ತರೀಕೆರೆ ತಾಲೂಕಿನ ನೀರಾವರಿ ಪ್ರದೇಶದಲ್ಲಿ ಬೆಳೆಯುವ ಭತ್ತದ ಕಟಾವು ಈಗಾಗಲೇ ಆರಂಭವಾಗಿದ್ದು, ಕಟಾವು ಮಾಡಿದ ಭತ್ತದ ಸಂಸ್ಕರಣೆ ಹಾಗೂ ಒಕ್ಕಲುತನಕ್ಕೆ ಮೋಡಕವಿದ ವಾತಾವರಣದಿಂದಾಗಿ ಮಂಕುಕವಿದಿದೆ. ಮಲೆನಾಡಿನಲ್ಲಿ ಕಾಫಿ, ಅಡಿಕೆ, ಭತ್ತದ ಕಟಾವಿನಂತಹ ಕೃಷಿ ಚಟುವಟಿಕೆ ಒಮ್ಮೆಗೆ ಆರಂಭವಾಗುವುದರಿಂದ ಭತ್ತದ ಕಟಾವಿಗೆ ಕಾರ್ಮಿಕರ ಕೊರತೆಯೂ ಉಂಟಾಗಿದೆ. ಪರಿಣಾಮ ಕಟಾವಿಗೆ ಬಂದಿರುವ ಭತ್ತದ ಗದ್ದೆಗಳಲ್ಲಿ ಬೆಳೆ ಹಾಗೇ ಬಿಡಲಾಗಿದ್ದು, ದಿಢೀರ್ ಮಳೆ ಬಂದಲ್ಲಿ ರೈತರು ಬೆಳೆದ ಬೆಳೆ ಮಣ್ಣು ಮಾಲಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಕಾರಣದಿಂದಾಗಿ ಭತ್ತದ ಕೃಷಿಕರು ಆಕಾಶತ್ತ ಮುಖ ಮಾಡಿದ್ದು ಮಳೆರಾಯನ ಕರುಣೆಗಾಗಿ ಕೈಮುಗಿಯುತ್ತಿದ್ದಾರೆ.

ಶುಕ್ರವಾರ ಸಂಜೆ ವೇಳೆ ಜಿಲ್ಲೆಯ ಮಲೆನಾಡು ಭಾಗದ ಕೆಲವೆಡೆ ತುಂತುರು ಮಳೆ ಬಿದ್ದಿದ್ದು, ಚಿಕ್ಕಮಗಳೂರು ನಗರದಲ್ಲೂ ಕೆಲವೊಮ್ಮೆ ಮಳೆಯ ಹನಿಗಳು ಉದುರಿವೆ. ಪರಿಣಾಮ ಶುಕ್ರವಾರ ರಾತ್ರಿ ಇಲ್ಲವೇ ಶನಿವಾರ ಧಾರಾಕಾರ ಮಳೆಯಾಗುವ ಸಂಭವ ಇದ್ದು, ಇದು ಜಿಲ್ಲೆಯ ಕಾಫಿ, ಅಡಿಕೆ, ಭತ್ತದ ಕೃಷಿಕರನ್ನು ಆತಂಕದಲ್ಲಿ ದಿನ ಕಳೆಯುವಂತೆ ಮಾಡಿದೆ. ಒಟ್ಟಾರೆ ರಾಜ್ಯದ ಕರಾವಳಿ ಭಾಗದಲ್ಲಿ ಸಂಭವಿಸಿರುವ ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಕಾಫಿನಾಡಿನ ಕೃಷಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News