ಶಿವಮೊಗ್ಗದಲ್ಲಿ ಗಲಭೆಗೆ ಪ್ರಚೋದನೆ ನೀಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಎಸ್ ಡಿಪಿಐ ಆಗ್ರಹ

Update: 2020-12-05 06:15 GMT

ಶಿವಮೊಗ್ಗ, ಡಿ.5: ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ನಡೆದ ಹಲ್ಲೆ ನಂತರ ಭುಗಿಲೆದ್ದ ಗಲಭೆಗೆ ಪ್ರಚೋದನೆ ನೀಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ)ದ ಶಿವಮೊಗ್ಗ ಘಟಕ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಖಾನ್ ಮಾತನಾಡಿ,  ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಯಾವ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಈ ಸಂಬಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡುವ‌ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ಉರಿಯುವ ಬೆಂಕಿ ತುಪ್ಪ ಸುರಿಯುವ ಕೆಲಸವನ್ನು ಸಚಿವರು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಹಲ್ಲೆ ಬಳಿಕ ಬಜರಂಗದಳದ ನಾಯಕನಿಂದ ರಾಮಣ್ಣ ಶೆಟ್ಟಿ ಪಾರ್ಕ್ ನಲ್ಲಿ ಗುಂಪು ಕಟ್ಟಿಕೊಂಡು ಪ್ರಚೋದನಕಾರಿ ಭಾಷಣ ಮಾಡಿ, ನಂತರ ಗಲಭೆ ಸೃಷ್ಟಿ ಮಾಡಿ ಅಮಾಯಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದರು.

ಯಾರೋ‌ ಕಿಡಿಗೇಡಿಗಳು ಮಾಡಿರುವ ಕೆಲಸಕ್ಕೆ ಇಡೀ ಮುಸ್ಲಿಂ ಸಮುದಾಯವನ್ನು  ಗುರಿಯಾಗಿಸಿಕೊಂಡು  ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸ್ಥಳೀಯ ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ‌ ಎಂದು ಆರೋಪಿಸಿದರು.

ಗಲಭೆಯಲ್ಲಿ ಆಗಿರುವ ಆಸ್ತಿ- ಪಾಸ್ತಿ ಹಾಗೂ ಗಾಯಾಳುಗಳಿಗೆ ಕೂಡಲೇ ಜಿಲ್ಲಾಡಳಿತದಿಂದ ಪರಿಹಾರ ನೀಡುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಲ್ಲಾ ಬಕ್ಷ್, ಪೀಸ್ ಆರ್ಗನೈಸೇಶನ್ ಅಧ್ಯಕ್ಷ ರಿಯಾಝ್ ಅಹ್ಮದ್, ಪ್ರಮುಖರಾದ ಇಮ್ರಾನ್ ಅಹ್ಮದ್, ಜಿಲಾನ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News