ಬಿಜೆಪಿ ಸಂಪರ್ಕದಲ್ಲಿದ್ದರೆ ಈಗಲೂ ನಾನು ಸಿಎಂ ಆಗಿ ಮುಂದುವರಿಯುತ್ತಿದ್ದೆ: ಕುಮಾರಸ್ವಾಮಿ

Update: 2020-12-05 10:13 GMT

ಮೈಸೂರು, ಡಿ.5: ಕಾಂಗ್ರೆಸ್ ಪಕ್ಷದ ಸಹವಾಸ ಮಾಡಿ ನನ್ನ ಶಕ್ತಿಯನ್ನು ಕುಂದಿಸಿಕೊಂಡೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಸಾ.ರಾ. ಕನ್ವೆನ್ಶನ್ ಹಾಲ್ ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಒಳ್ಳೆಯ ಹೆಸರು ಪಡೆದಿದ್ದೆ. ಆದರೆ 2018ರಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿದ ಪರಿಣಾಮ  ನನ್ನ ಮತ್ತು ಪಕ್ಷದ  ಶಕ್ತಿ ಕುಂದಿತು. ನಾನು ಮುಖ್ಯಮಂತ್ರಿಯಾದ ದಿನದಿಂದಲೂ ಸಿದ್ದರಾಮಯ್ಯ ಮತ್ತು ತಂಡ ನನ್ನ ಬಗ್ಗೆ ಅಪಪ್ರಚಾರ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಬಿಜೆಪಿ ಸಂಪರ್ಕದಲ್ಲಿದ್ದರೆ ಈಗಲೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದೆ. ಸಿದ್ದರಾಮಯ್ಯ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಿ ಟೀಂ ಎಂದು ನಮ್ಮ ವಿರುದ್ದ ಪ್ರಚಾರ ಮಾಡಿದರು. ಅದರ ಪರಿಣಾಮ ಬಿಜೆಪಿ 105 ಸ್ಥಾನ ಪಡೆಯಿತು ಎಂದು ಹೇಳಿದರು.

ನಾನು ಬಿಜೆಪಿ ಜೊತೆ ಕೈಜೋಡಿಸುವುದಾದರೆ ಓಪನ್ ಆಗಿ ಹೊಗುತ್ತೇನೆ. ಸಿದ್ದರಾಮಯ್ಯ ಅವರ ರೀತಿ ಕದ್ದುಮುಚ್ಚಿ ಬಿಜೆಪಿ ನಾಯಕರನ್ನು ಭೇಟಿ ಮಾಡುವುದಿಲ್ಲ, ಇವರು ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ಹೇಳಿದರು.

ನಾವು ಯಾರನ್ನು ಬೆಳೆಸುತ್ತೇವೊ ಅವರು ನಮಗೆ ವಿರೋಧಿಗಳಾಗುತ್ತಾರೆ. ದೇವೇಗೌಡರ ಫೋಟೋ ಇಟ್ಟುಕೊಳ್ಳುತ್ತೇನೆ ಎಂದು ಹೇಳುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್  ನನ್ನ ಕಂಡರೆ ಆಗುವುದಿಲ್ಲ ಎನ್ನುತ್ತಾರೆ ನಾನು ಮಾಡಿರುವ ತಪ್ಪಾದರೂ ಏನು ಎಂದು ಪ್ರಶ್ನಿಸಿದರು.

ನಾವು ಯಾರನ್ನು ನಂಬಿ ಬೆಳೆಸುತ್ತೇವೊ ಅವರು ನಮ್ಮ ವಿರೋಧಿಗಳಾಗುತ್ತಾರೆ. ಇದೊಂತರ ನಮ್ಮ ಕುಟುಂಬಕ್ಕೆ ಶಾಪ ಎನ್ನಿಸುತ್ತದೆ. ಇದರ ಬಗ್ಗೆ ಸಂಶೋಧನೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಒಂದೂವರೆ ವರ್ಷ ಕಳೆದಿದ್ದಾರೆ. ಆದರೆ ಆಡಳಿತ ನಡೆಸುವಲ್ಲಿ ವಿಫಲಗೊಂಡಿದ್ದಾರೆ.

 ಗ್ರಾ.ಪಂ. ಚುನಾವಣೆ ಮುಂದಿಟ್ಟುಕೊಂಡು ಮೂರ್ನಾಲ್ಕು ಸಚಿವರಿಗೆ ಉಸ್ತುವಾರಿ ನೀಡಿ ಗ್ರಾಮ ಸ್ವರಾಜ್ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಗಾಂಧಿಜಿ ಹೆಸರಿಗೆ ಅವಮಾನ ಮಾಡದೆ ಜನರ ಕಷ್ಟವನ್ನಿ ಕೇಳುವ ನಿಟ್ಟಿನಲ್ಲಿ ನಿಮ್ಮ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ಹರಿಹಾಯ್ದರು.

ಜೆಡಿಎಸ್  ತನ್ನದೇ ಶಕ್ತಿ ಮೇಲೆ ಅಧಿಕಾರಕ್ಕೆ ಬರಲಿದೆ, ನಾವು ಯಾರ ಬೆಂಬಲವನ್ನು ಬಯಸುವುದಿಲ್ಲ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರವನ್ನು ಬಗ್ಗುಬಡಿಯಲು ಕಾಂಗ್ರೆಸ್ ಪಕ್ಷ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡಿದೆ. ಹಾಗಾಗಿ ಪ್ರಾದೇಶಿಕ ಪಕ್ಷಗೊಳಗೂಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದು, ತೆಲಂಗಾಣದ ಸಿಎಂ ಚಂದ್ರಶೇಖರ್ ರಾವ್ ದೂರವಾಣಿ ಕರೆ ಮಾಡಿದ್ದಾರೆ. ಇನ್ನೊಂದು ಇರಡು ದಿನಗಳಲ್ಲಿ ಸಭೆ ಸೇರಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News