ಪ್ರತಿಭಟನೆಗಷ್ಟೆ ಸೀಮಿತಗೊಂಡ 'ಕರ್ನಾಟಕ ಬಂದ್': ಕೆಲವೆಡೆ ರಸ್ತೆ ತಡೆ, ಪೊಲೀಸರ ಜೊತೆ ವಾಗ್ವಾದ

Update: 2020-12-05 12:26 GMT

ಬೆಂಗಳೂರು, ಡಿ.5: ರಾಜ್ಯ ಸರಕಾರ ಮರಾಠ ಅಭಿವೃದ್ಧಿ ನಿಗಮ ರಚಿಸುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿದ್ದ ರಾಜ್ಯ ಬಂದ್ ಪ್ರತಿಭಟನೆಗಷ್ಟೆ ಸೀಮಿತಗೊಂಡಿತ್ತು. ಕೆಲವೆಡೆ ಟೈರ್ ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು ಹೊರತು ಪಡಿಸಿದಂತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ, ಮೈಸೂರು, ಮಂಡ್ಯ, ಹಾಸನ, ವಿಜಯಪುರ ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕನ್ನಡ ರಕ್ಷಣಾ ವೇದಿಕೆ ಸೇರದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಳನ್ನು ಅಡ್ಡಗಟ್ಟಿ, ರಾಜ್ಯ ಸರಕಾರದ ನೀತಿಗಳನ್ನು ಖಂಡಿಸಿದರು. ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಡದಂತೆ ಕಾರ್ಯಕರ್ತರನ್ನು ಬಂಧಿಸಿದರು. ಆ ಮೂಲಕ ರಾಜ್ಯ ಸರಕಾರವೇ ರಾಜ್ಯ ಬಂದ್‍ನ್ನು ವಿಫಲಗೊಳಿಸಿದೆ ಎಂದು ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಪುರಭವನದ ಮುಂಭಾಗ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಈ ವೇಳೆ ಪೊಲೀಸ್ ಹಾಗೂ ರಾಜ್ಯ ಸರಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ವಕೀಲರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮರಾಠ ಅಭಿವೃದ್ಧಿ ನಿಗಮ ರಚನೆ ಬೇಡ, ಕೂಡಲೇ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು. ಈ ವೇಳೆ ಪೊಲೀಸರು ವಕೀಲರನ್ನು ತಮ್ಮ ವಶಕ್ಕೆ ಪಡೆದರು.

ಈ ವೇಳೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬ ಪರಭಾಷಾ ಏಜೆಂಟ್. ಬಿಜೆಪಿ, ಆರೆಸ್ಸೆಸ್ ಸಂಘಟನೆಗಳು ಕನ್ನಡ ವಿರೋಧಿಯಾಗಿವೆ. ಈ ಬಗ್ಗೆ ನಾಡಿನ ಜನತೆ ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಆರೆಸ್ಸೆಸ್ ನೇತೃತ್ವದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಅವರು ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಸೇರಿದಂತೆ ಒಂದು ಸಾವಿರ ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಆಡುಗೋಡಿಯ ಪೊಲೀಸ್ ಮೈದಾನದಲ್ಲಿ ಇಡಲಾಗಿತ್ತು. ಅಲ್ಲಿಯೂ ಕನ್ನಡ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿನಗರದಲ್ಲಿ ಬಂದ್ ಯಶಸ್ವಿ: ಕನ್ನಡಪರ ಸಂಘಟನೆಗಳ ಕೇಂದ್ರ ಕಚೇರಿಗಳನ್ನು ಹೊಂದಿರುವ ಗಾಂಧಿ ನಗರದಲ್ಲಿ ಬಂದ್ ಯಶಸ್ವಿಯಾಗಿತ್ತು. ಇಲ್ಲಿನ ಆನಂದ್‍ರಾವ್ ವೃತ್ತ, ರೈಸ್‍ಕೋರ್ಸ್ ರಸ್ತೆ, ಕಾಪಾಲಿ ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳ ವ್ಯಾಪಾರ-ವಹಿವಾಟು ಸಂಪೂರ್ಣವಾಗಿ ಬಂದ್ ಆಗಿತ್ತು. ವಾಹನ ಸಂಚಾರವು ವಿರಳವಾಗಿತ್ತು.

ಯತ್ನಾಳ್ ವಿರುದ್ಧ ಆಕ್ರೋಶ: ಕನ್ನಡಪರ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಅವರ ಪ್ರತಿಕೃತಿಯನ್ನು ದಹಿಸಿ, ಕನ್ನಡ ದ್ರೋಹಿ ಯತ್ನಾಳ್‍ಗೆ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕನ್ನಡಿಗರಿಗೆ ವಂಚನೆ ಮಾಡುತ್ತಿರುವುದು ನನ್ನ ಅಪ್ಪ, ಅಮ್ಮ ಹಾಗೂ ಹೆಂಡತಿ ಸಾವಿಗಿಂತ ಹೆಚ್ಚು ನೋವಾಗಿದೆ. ಮುಖ್ಯಮಂತ್ರಿ ಮೋಸಗಾರನ ರೀತಿ ವರ್ತಿಸುತ್ತಿದ್ದಾರೆ. ನಮಗೆ ಪ್ರತಿಭಟನೆ ಮಾಡುವುದಕ್ಕೂ ಅವಕಾಶ ಮಾಡಿಕೊಡದಂತೆ ನಮ್ಮನ್ನು ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು.

-ವಾಟಾಳ್ ನಾಗರಾಜ್, ರಾಜ್ಯಾಧ್ಯಕ್ಷ, ವಾಟಾಳ್ ಪಕ್ಷ

ಮರಾಠಿಗರಿಂದ ವಿಜಯೋತ್ಸವ ಆಚರಣೆ

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್‍ಗೆ ನೀರಸ ಪ್ರತಿಕ್ರಿಯೆ ಹಾಗೂ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಧಾರವಾಡದಲ್ಲಿ ಮರಾಠಿಗರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ. ಇಲ್ಲಿನ ಶಿವಾಜಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಜೈಕಾರದ ಘೋಷಣೆ ಕೂಗಿದ್ದಾರೆ. ಮರಾಠಿಗರ ಈ ನಡವಳಿಕೆಗೆ ಪ್ರತಿಕ್ರಿಯಿಸಿರುವ ಕನ್ನಡಪರ ಸಂಘಟನೆಗಳು, ರಾಜ್ಯ ಸರಕಾರ ಕನ್ನಡ ವಿರೋಧಿ ನೀತಿಯಿಂದಾಗಿ ಕನ್ನಡಿಗರು ಗುಲಾಮರಂತೆ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News