ಅಧಿವೇಶನದಲ್ಲಿ ‘ಗೋಹತ್ಯೆ ನಿಷೇಧ ಕಾಯ್ದೆ' ಮಂಡನೆಗೆ ಕಾರ್ಯಕಾರಿಣಿ ತೀರ್ಮಾನ: ಗಣೇಶ್ ಕಾರ್ಣಿಕ್

Update: 2020-12-05 13:42 GMT

ಬೆಳಗಾವಿ, ಡಿ. 5: ವಿಧಾನ ಮಂಡಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮತ್ತು ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು ಮಂಡನೆ ಮಾಡಲು ನಿರ್ಣಯಿಸಿರುವ ಬಿಜೆಪಿ ಕಾರ್ಯಕಾರಿಣಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ 'ಗ್ರಾಮ ಸ್ವರಾಜ್ಯ' ಸಮಾವೇಶ ಯಶಸ್ವಿಗೆ ತೀರ್ಮಾನಿಸಲಾಗಿದೆ ಎಂದು ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಶನಿವಾರ ಪಕ್ಷದ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಅವರು, ಶೇ.80ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲ ನಾಯಕರು ಒಟ್ಟಿನಿಂದ ಗ್ರಾ.ಪಂ.ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯನಿರ್ವಹಿಸಬೇಕು ಎಂದು ನಿರ್ಧರಿಸಲಾಗಿದೆ ಎಂದರು.

ಪಕ್ಷದಲ್ಲಿ ಶಿಸ್ತು ಸಮಿತಿ ಮತ್ತು ಚುನಾವಣಾ ಸಮಿತಿ ರಚನೆ ಮಾಡುವ ಅಧಿಕಾರವನ್ನು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ನೀಡಲಾಗಿದೆ. ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯವಾಗಿರುವ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಗಣೇಶ್ ಕಾರ್ಣಿಕ್ ಇದೇ ವೇಳೆ ವಿವರಿಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮಾತನಾಡಿ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದು, ಕೆಲ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿಲ್ಲ. ಮರಾಠಿ ಬೇರೆ ಮತ್ತು ಮರಾಠಾ ಬೇರೆ ಎಂಬುದನ್ನು ಕನ್ನಡಪರ ಸಂಘಟನೆಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News