ವಲಸೆ ಕಾರ್ಮಿಕ ಬಾಲಕಿಯ ಹತ್ಯೆ ಪ್ರಕರಣ: ದುಷ್ಕರ್ಮಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಧರಣಿ

Update: 2020-12-05 14:09 GMT

ಮಂಡ್ಯ, ಡಿ.5: ಹುರುಗಲವಾಡಿ ಗ್ರಾಮದ ಬಳಿ ಕಬ್ಬಿನ ಗದ್ದೆಯಲ್ಲಿ ಬಲತ್ಕಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ಮದ್ದೂರು ತಾಲೂಕು ಕೊಪ್ಪ ಗ್ರಾಮದ ಸಮಾನ ಮನಸ್ಕರರ ವೇದಿಕೆಯಿಂದ ಕೊಪ್ಪ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಎದುರು ಶನಿವಾರ ಪ್ರತಿಭಟನೆ ನಡೆಯಿತು.

ವೇದಿಕೆಯ ಸಂಚಾಲಕ ಹುರುಗಲವಾಡಿ ರಾಮಯ್ಯ ಮಾತನಾಡಿ, ಕೊಪ್ಪ ಕಾರ್ಖಾನೆಗೆ ಕಬ್ಬು ಕಡಿದು ಸರಬರಾಜು ಮಾಡುವ ಸಲುವಾಗಿ ಬಳ್ಳಾರಿಯಿಂದ ಬಂದಿರುವ ವಲಸೆ ಕಾರ್ಮಿಕರಿಗೆ ರಕ್ಷಣೆ ನೀಡಬೇಕು. ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

ಅತ್ಯಾಚಾಕರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿಯ ಪರವಾಗಿ ರಾಜ್ಯದ ಯಾವುದೇ ವಕೀಲರು ವಕಾಲತ್ತು ವಹಿಸಬಾರದು. ಅಲ್ಲಲ್ಲಿ ಟೆಂಟ್ ಹಾಕಿಕೊಂಡಿರುವ ಕೂಲಿ ಕಾರ್ಮಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಕಾರ್ಖಾನೆಯ ಆಡಳಿತ ಮಂಡಳಿ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ತರಿಕೆರೆ ಕಾಲನಿ ರಾಮನಂದ ಮಾತನಾಡಿ, ಕಬ್ಬು ಕಟಾವು ಮಾಡಲು ಬಂದಿರುವ ವಲಸೆ ಕಾರ್ಮಿಕರಿಗೆ ಮನೆ ಸೇರಿದಂತೆ ಮೂಲ ಸೌಕರ್ಯ ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ, ರಕ್ಷಣೆಗೆ ಕ್ರಮವಹಿಸಲು ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮವಹಿಸಿಲ್ಲ ಎಂದು ಕಿಡಿಕಾರಿದರು.

ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿರುವುದು ಸ್ವಾಗತ. ಆದರೆ, ಆತನಿಗೆ ಉಗ್ರ ಶಿಕ್ಷೆಯಾಗುವಂತೆ ಕ್ರಮವಹಿಸಿ ಕೊಲೆಯಾದ ಬಾಲಕಿಯ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು. ಕಾರ್ಖಾನೆ ಮತ್ತು ಸಂಬಂಧಿಸಿದ ಇಲಾಖೆಯಿಂದ ವಲಸೆ ಕಾರ್ಮಿಕರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಹನುಮೇಶ್, ಮನ್‍ಮುಲ್ ಮಾಜಿ ಅಧ್ಯಕ್ಷ ಚಿಕ್ಕೋನಹಳ್ಳಿ ತಮ್ಮಯ್ಯ, ಮುಖಂಡರಾದ ತಗ್ಗಹಳ್ಳಿ ಸುಂದರೇಶ್, ಮುಹಮ್ಮದ್ ಇಲಿಯಾಜ್, ಹೂತಕೆರೆ ಜನಾರ್ಧನ್, ಚಿಕ್ಕದೊಡ್ಡಿ ಶಿವಕುಮಾರ್, ರಾಮೇಗೌಡ, ಪುಟ್ಟಸ್ವಾಮಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News