ಗ್ರಾಮ ಪಂಚಾಯತ್ ಚುನಾವಣೆ: ಚಿಕ್ಕಮಗಳೂರಿನಲ್ಲಿ ಡಿ.22ರಂದು ಒಂದೇ ಹಂತದಲ್ಲಿ ಮತದಾನ

Update: 2020-12-05 14:29 GMT

ಚಿಕ್ಕಮಗಳೂರು, ಡಿ.5: ಜಿಲ್ಲೆಯಲ್ಲಿ ಡಿ.22 ಮತ್ತು 27 ರಂದು ಎರಡು ಹಂತದಲ್ಲಿ 209 ಗ್ರಾಮ ಪಂಚಾಯತ್ ಗಳಿಗೆ ನಡೆಸಲು ಉದ್ದೇಶಿಸಲಾಗಿದ್ದ ಚುನಾವಣೆಯನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಮೊದಲ ಹಂತದಲ್ಲಿ ಅಂದರೆ ಡಿ.22ರಂದು ಚಿಕ್ಕಮಗಳೂರು ತಾಲೂಕು, ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ತಾಲೂಕಿನಲ್ಲಿ ಎರಡನೆಯ ಹಂತವಾದ ಡಿ.27ರಂದು ನರಸಿಂಹರಾಜಪುರ, ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲೂಕಿನಲ್ಲಿ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಜಿಲ್ಲೆಯಲ್ಲಿ ಡಿ.17ರಿಂದ 29ರವರೆಗೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ದತ್ತಜಯಂತಿ ನಡೆಯುತ್ತಿದ್ದು, ಅಲ್ಲಿಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಾಗಿರುತ್ತದೆ. ಹಾಗಾಗಿ ಎರಡು ಹಂತದಲ್ಲಿ ಚುನಾವಣೆ ನಡೆದರೆ ಅಗತ್ಯ ಬಂದೋಬಸ್ತ್ ಗೆ ತೊಂದರೆಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲನೆಯ ಹಂತದ ಚುನಾವಣಾ ವೇಳಾಪಟ್ಟಿಯಂತೆ ಎಲ್ಲ ತಾಲೂಕಿನ ಗ್ರಾಮ ಪಂಚಾಯತ್ ಗಳ ಚುನಾವಣೆ ನಡೆಸಲು ಆದೇಶಿಸಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಶಾಂತಿ ಹಾಗೂ ನಿರ್ಭೀತಿಯಿಂದ ಚುನಾವಣೆ ನಡೆಯುವಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ದತ್ತಜಯಂತಿ ಆಚರಿಸುತ್ತಿರುವುದರಿಂದ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಪೊಲೀಸ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳ ಸೇವೆಯೂ ಅವಶ್ಯಕವಾಗಿದ್ದು, ಚುನಾವಣೆಯನ್ನು ಎರಡು ಹಂತದಲ್ಲಿ ಮಾಡಿದಲ್ಲಿ ಬಂದೋಬಸ್ತ್ ಮಾಡಲು ಕಷ್ಟಸಾಧ್ಯವಾಗುತ್ತದೆ. ಬೇರೆ ಜಿಲ್ಲೆಗಳಲ್ಲೂ ಇದೇ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಅಲ್ಲಿಂದ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವುದಾದಲ್ಲಿ ಪೊಲೀಸ್ ಹಾಗೂ ಜಿಲ್ಲಾಡಳಿತದಲ್ಲಿ ಸೂಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವ್ಯವಸ್ಥೆ ಮಾಡಿಕೊಂಡು ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಬಹುದಾಗಿರುತ್ತದೆ. ಎರಡು ಹಂತದ ಬದಲು ಡಿ.22 ರಂದೇ ಮೊದಲನೆಯ ಹಂತದಲ್ಲಿ ಎಲ್ಲಾ ತಾಲೂಕಿನ ಗ್ರಾಮ ಪಂಚಾಯತ್ಗಳ ಚುನಾವಣೆ ನಡೆಸಲು ಆಯೋಗದ ಆದೇಶವನ್ನು ಜಿಲ್ಲಾಧಿಕಾರಿ ಕೋರಿದ್ದರಿಂದ ಚುನಾವಣಾ ಆಯೋಗ ಜಿಲ್ಲೆಯ 209 ಪಂಚಾಯತ್ಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಅನುಮತಿ ನೀಡಿದೆ.

ಜಿಲ್ಲೆಯಲ್ಲಿ ಡಿ.22ಕ್ಕೆ 209 ಪಂಚಾಯತ್ಗಳ 2,138 ಸ್ಥಾನಗಳಿಗೆ 1100 ಮತಗಟ್ಟೆಯಲ್ಲಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಡಿ.11 ಅಂತಿಮ ದಿನ. 12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿ.14ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಡಿ.22ರಂದು ಮತದಾನ ನಡೆದರೆ, ಅವಶ್ಯಕತೆ ಇದ್ದರೆ ಡಿ. 24ಕ್ಕೆ ಮರುಮತದಾನ ನಡೆಯುವುದು, ಡಿ.30ಕ್ಕೆ ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News