ರಾಜ್ಯದಲ್ಲಿ ಕೊರೋನ 2ನೇ ಅಲೆ ಸಾಧ್ಯತೆ: 'ರಾತ್ರಿ ಕರ್ಫ್ಯೂ' ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಬೊಮ್ಮಾಯಿ

Update: 2020-12-05 15:37 GMT

ಬೆಳಗಾವಿ, ಡಿ. 5: 'ರಾಜ್ಯದಲ್ಲಿ ಚಳಿಗಾಲದ ಸಂದರ್ಭದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಹೇರುವ ಕುರಿತು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಆದರೆ, ರಾತ್ರಿ ಕರ್ಫ್ಯೂ ವಿಧಿಸುವ ಸಂಬಂಧ ಚಿಂತನೆ ನಡೆದಿದೆ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2021ರ ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಹೇರುವ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ ಬಳಿಕ ನಿರ್ಧರಿಸಲಾಗುವುದು ಎಂದು ಹೇಳಿದರು.

ವರದಿ ನೀಡಲು ಸೂಚನೆ: ಜಿಲ್ಲೆಯ ಹಿಂಡಲಗಾ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ವಿಶೇಷ ಅತಿಥ್ಯ ನೀಡಲಾಗುತ್ತಿರುವ ಕುರಿತು ವರದಿ ನೀಡಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಲೋಪಗಳಿದ್ದರೆ ಕ್ರಮ ವಹಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು.

ಬಂದ್ ವಿಫಲ: ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಸರಕಾರದ ತೀರ್ಮಾನವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‍ಗೆ ಜನತೆ ಸಹಕರಿಸಿಲ್ಲ. ಎಲ್ಲ ವಾಹನ, ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಒತ್ತಾಯಪೂರ್ವಕವಾಗಿ ಬಂದ್ ನಡೆಸಲು ಮುಂದಾದವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರೇಮದ ಹೆಸರಿನಲ್ಲಿ ಹೆಣ್ಣು ಮಕ್ಕಳ ಶೋಷಣೆ ತಡೆಗಟ್ಟಲು ಲವ್ ಜಿಹಾದ್ ತಡೆ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಇದೇ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಲಾಗುವುದು ಎಂದ ಅವರು, 2016ರಲ್ಲಿ ಅಂದಿನ ಬಿಜೆಪಿ ಸರಕಾರ ರೂಪಿಸಿದ್ದ ಕಾಯ್ದೆಯನ್ನು ಅಂದಿನ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News