ಮಂಗಳೂರಿನ ಗ್ರಾಮಗಳು ಸೇರಿ ಒಟ್ಟು 26 ಗ್ರಾ.ಪಂ.ಗಳನ್ನು ಚುನಾವಣೆಯಿಂದ ಕೈ ಬಿಟ್ಟ ಆಯೋಗ

Update: 2020-12-05 15:02 GMT

ಬೆಂಗಳೂರು, ಡಿ.5: ಪ್ರಸ್ತುತ ಚುನಾವಣೆ ನಡೆಸಲಾಗುತ್ತಿರುವ ಗ್ರಾಮ ಪಂಚಾಯತ್ ಗಳಲ್ಲಿ ಕೆಲವು ಗ್ರಾಮ ಪಂಚಾಯತ್ ಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಲು ಸರಕಾರವು ಕರಡು ಅಧಿಸೂಚನೆ ಹೊರಡಿಸಿರುವುದರಿಂದ 26 ಗ್ರಾಮ ಪಂಚಾಯತ್ ಗಳನ್ನು ಚುನಾವಣೆಯಿಂದ ಕೈ ಬಿಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್ ಗೆ ಸೇನಾಪುರ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ಪ್ರಶ್ನಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರ ಬಳಿ ಮೇಲ್ಮನವಿ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿರುವುದರಿಂದ ಹೊಸಾಡು ಗ್ರಾಮ ಪಂಚಾಯತ್ ಯನ್ನು ಚುನಾವಣೆಯಿಂದ ಕೈ ಬಿಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಡಿ.27ರಿಂದ 29ರವರೆಗೆ ದತ್ತ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಅಭಿಪ್ರಾಯದಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲ ತಾಲೂಕಿನ ಗ್ರಾಮ ಪಂಚಾಯತ್ ಗಳ ಚುನಾವಣೆಯನ್ನು ಮೊದಲನೆ ಹಂತದ ಚುನಾವಣಾ ವೇಳಾಪಟ್ಟಿಯಂತೆ ನಡೆಸಲು ಆದೇಶಿಸಿದ್ದು, ಈ ಜಿಲ್ಲೆಯಲ್ಲಿ ಮತದಾನವು ಡಿ.22ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಯ ಪ್ರಕಟಣೆಯ ತಿಳಿಸಿದೆ.

ಚುನಾವಣೆಯಿಂದ ಕೈ ಬಿಡಲಾಗುತ್ತಿರುವ ಗ್ರಾ.ಪಂ.ಗಳು: ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ತಾಲೂಕಿನ ಸೋಮಶಟ್ಟಿಹಳ್ಳಿ, ಚಿಕ್ಕಬಾಣಾವರ, ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ, ಯಲಹಂಕ ತಾಲೂಕಿನ ಹುಣಸಮಾರನಹಳ್ಳಿ, ಸೊಣ್ಣಪ್ಪನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ, ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಗಟ್ಟಿ, ಅಥಣಿ ತಾಲೂಕಿನ ಕಾಗವಾಡ, ಬೆಳಗಾವಿ ತಾಲೂಕಿನ ಮಚ್ಚೆ, ಪೀರನವಾಡಿ ಗ್ರಾಮ ಪಂಚಾಯತ್ .

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ, ಚಿಂಚೋಡಿ, ಕರಡಿಗುಡ್ಡ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ, ಮನ್ನಬೆಟ್ಟು, ಕಟೀಲು(ಕೊಂಡೆಮೂಲ), ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್.ಕಡದಕಟ್ಟೆ, ಹರಿಹರ ತಾಲೂಕಿನ ಗುತ್ತೂರು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ(ಗುಳದಕೇರಿ), ಮಂಕಿ-ಎ(ಹಳೆಮರ), ಮಂಕಿ-ಬಿ(ಅನಂತವಾಡಿ), ಮಂಕಿ-ಸಿ(ಚಿತ್ತಾರ), ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ವೇಮಗಲ್, ಕುರುಗಲ್, ಶೆಟ್ಟಿಹಳ್ಳಿ, ಚೌಡದೇವನಹಳ್ಳಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News