ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ: ಸಿದ್ದರಾಮಯ್ಯ

Update: 2020-12-05 15:45 GMT
File photo

ಬೆಳಗಾವಿ, ಡಿ.5: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ಬಹಳ ನಿಸ್ಸೀಮ. ರಾಜಕೀಯವಾಗಿ ಅನುಕೂಲ ಪಡೆಯಲು ಸಮಯಕ್ಕೆ ತಕ್ಕಂತೆ ಅವರು ಸುಳ್ಳು ಹೇಳುತ್ತಾರೆ. ಅವರ ಮಾತುಗಳಲ್ಲಿ ಯಾವುದೆ ಸತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಶನಿವಾರ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಪಕ್ಷ ಗೆದ್ದಿದ್ದು 37 ಸ್ಥಾನ, ನಾವು ಗೆದ್ದಿದ್ದು 80 ಸ್ಥಾನ. ಆದರೂ, ಮುಖ್ಯಮಂತ್ರಿಯನ್ನಾಗಿ ನಾವು ಮಾಡಿದ್ದು ಯಾರನ್ನ? ಒಂದು ವರ್ಷ ಅವರನ್ನು ಮುಖ್ಯಮಂತ್ರಿ ಮಾಡಿದ್ದರಿಂದ ಅವರಿಗೆ ಅನುಕೂಲ ಆಯಿತೇ? ಅಥವಾ ನಮಗೆ ಆಯಿತೇ? ಎಂದು ಪ್ರಶ್ನಿಸಿದರು.

ಗುಡ್‍ವಿಲ್ ಇದ್ದರೆ ತಾನೆ ಹೋಗೋಕೆ, ಅವರಲ್ಲಿ ಗುಡ್‍ವಿಲ್ ಎಲ್ಲಿದೆ. ಕಣ್ಣೀರು ಹಾಕುವುದು ದೇವೇಗೌಡರ ಮನೆಯವರ ಸಂಸ್ಕೃತಿ ಅದರಲ್ಲಿ ಹೊಸದೇನಿಲ್ಲ. ಒಳ್ಳೆಯದಕ್ಕೂ ಕಣ್ಣೀರು ಹಾಕುತ್ತಾರೆ, ಕೆಟ್ಟದಕ್ಕೂ ಕಣ್ಣೀರು ಹಾಕುತ್ತಾರೆ. ಓಲೈಕೆಗೂ ಹಾಕುತ್ತಾರೆ, ಯಾರನ್ನಾದರೂ ನಂಬಿಸಲು ಕಣ್ಣೀರು ಹಾಕುತ್ತಾರೆ. ಅವರ ಕಣ್ಣೀರಿಗೆ ಬೆಲೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಸಹಕಾರದಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಆಡಳಿತ ನಡೆಸಿದ್ದು ತಾಜ್ ವೆಸ್ಟ್ ಎಂಡ್ ಹೊಟೇಲ್‍ನಿಂದ. ಶಾಸಕರ ಕೈಗೆ ಸಿಗಲಿಲ್ಲ. ಅವರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಕಾಂಗ್ರೆಸ್ ಶಾಸಕರಿಗೆ ಇವರ ಮನೆಯಿಂದ ತಂದು ಅನುದಾನ ಕೊಟ್ರಾ? ಇವರನ್ನು ಮುಖ್ಯಮಂತ್ರಿ ಮಾಡಿದ್ದರಿಂದ ಅನುದಾನ ಕೊಟ್ಟಿದ್ದಾರೆ. ಸರಕಾರದ ಹಣ, ಜನರ ತೆರಿಗೆ ಹಣದಿಂದ ಅನುದಾನ ಕೊಟ್ಟಿದ್ದಾರೆ. ಅದರಲ್ಲಿ ಇವರ ದೊಡ್ಡಸ್ಥಿಕೆ ಏನಿದೆ? ಸರಕಾರ ಬಿದ್ದರೆ ಬೀಳಲಿ ಎಂದು ನಾನೇ ಅಮೆರಿಕಾಗೆ ಹೋಗಿದ್ದೆ ಎಂದು ಈ ಹಿಂದೆ ಕುಮಾರಸ್ವಾಮಿ ಹೇಳಿಕೆ ನೀಡಿರಲಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಿದ್ದರಾಮಯ್ಯ ಕದ್ದು ಮುಚ್ಚಿ ಯಾರು ಯಾರನ್ನು ಭೇಟಿಯಾಗುತ್ತಾರೆ ಅನ್ನೋದನ್ನು ಶೀಘ್ರವೆ ಬಹಿರಂಗಪಡಿಸುತ್ತೇನೆ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮಾತುಗಳಿಗೆ ಉತ್ತರವನ್ನೆ ಕೊಡಬಾರದು. ಅಷ್ಟೊಂದು ಬೇಜವಾಬ್ದಾಯಿಂದ ಸುಳ್ಳು ಹೇಳುತ್ತಾರೆ. ವೆಸ್ಟ್ ಎಂಡ್ ಹೊಟೇಲ್‍ನಲ್ಲಿ ಕೂತು ಸರಕಾರ ನಡೆಸಿದರೆ, ಶಾಸಕರ ವಿಶ್ವಾಸವನ್ನು ಹೇಗೆ ಗಳಿಸಲು ಸಾಧ್ಯ? ರಾಜ್ಯದ ಇತಿಹಾಸದಲ್ಲಿ ಯಾರಾದರೂ ಮುಖ್ಯಮಂತ್ರಿ ಹೊಟೇಲ್‍ನಿಂದ ಆಡಳಿತ ನಡೆಸಿರುವುದನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದರು.

ಬೆಳಗಾವಿಯಲ್ಲಿ 400 ಕೋಟಿ ರೂ.ಖರ್ಚು ಮಾಡಿ ಸುವರ್ಣ ವಿಧಾನಸೌಧ ಕಟ್ಟಿಸಿರುವುದು ಯಾವ ಪುರುಷಾರ್ಥಕ್ಕಾಗಿ. ಕಳೆದ ಎರಡು ವರ್ಷಗಳಿಂದ ಇಲ್ಲಿ ಅಧಿವೇಶನ ನಡೆದಿಲ್ಲ. ಕೊರೋನ ನೆಪ ಹೇಳಿಕೊಂಡು ಇಲ್ಲಿ ಅಧಿವೇಶನ ನಡೆಸಲಿಲ್ಲ. ಆದರೆ, ಕಾರ್ಯಕಾರಿಣಿ ಸಭೆ ನಡೆಸಲು ಬಿಜೆಪಿಯವರು ಇಲ್ಲಿಗೆ ಬಂದಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲ. ಇಲ್ಲಿನ ಜನರ, ರೈತರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಮುಂದಾಗಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯದಲ್ಲಿ ಈಗಾಗಲೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಎಮ್ಮೆ, ದನಗಳನ್ನು ಸಾಕುವುದು ರೈತರು, ಅವುಗಳ ಗಂಜಲ, ಸೆಗಣಿ ಎತ್ತಿ, ಮೇವು ಹಾಕಿ ಸಾಕುವುದು ರೈತರು. ಆರೆಸ್ಸೆಸ್ ನವರು ಎಂದಾದರೂ ಎಮ್ಮೆ, ದನಗಳ ಗಂಜಲ, ಸೆಗಣಿ ಎತ್ತಿದ್ದಾರಾ? ಕೇವಲ ರಾಜಕೀಯ ಕಾರಣಗಳಿಗಾಗಿ ಈ ವಿಷಯಗಳನ್ನು ಮಾತನಾಡಿ, ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ತನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪ ಅವರ ತಾತನಷ್ಟು ನಾನು ಮಾತನಾಡಬಲ್ಲೆ. ಆದರೆ, ನನಗೆ ಸಂಸ್ಕೃತಿ, ಸಂಸ್ಕಾರವಿದೆ. ರಾಜಕೀಯ ಭಾಷೆಯಿದೆ. ಆದರೆ, ಈಶ್ವರಪ್ಪಗೆ ರಾಜಕೀಯ ಭಾಷೆ ಬಗ್ಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

ಉತ್ತರ ಕರ್ನಾಟಕ ಭಾಗದ ಪ್ರವಾಹ ಸಂತ್ರಸ್ತರ ಬಗ್ಗೆ ಬಿಜೆಪಿಯವರು ಕಾರ್ಯಕಾರಿಣಿಯಲ್ಲಿ ಏನು ತೀರ್ಮಾನಗಳನ್ನು ಕೈಗೊಳ್ಳುತ್ತಾರೋ ನೋಡಿಕೊಂಡು, ವಿಧಾನಸಭೆಯಲ್ಲಿ ಅನುಸರಿಸಬೇಕಿರುವ ಕಾರ್ಯತಂತ್ರ ಕುರಿತು ಚರ್ಚೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಚ್.ಡಿ.ಕುಮಾರಸ್ವಾಮಿ ಅವರೇ, ನಿಮ್ಮ ಬಣ್ಣ ಬಯಲಾಗಿದೆ. ನೀವು ಎಂದಿಗೂ ಬಿಜೆಪಿ ‘ಬಿ' ಟೀಮ್ ಎಂದು ಒಪ್ಪಿಕೊಂಡಿದ್ದೀರಿ. ಅದಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ನಿಮ್ಮನ್ನ ಸಿಎಂ ಮಾಡುತ್ತಿದ್ದರೇ? ನಿಮಗೆ ಅವಕಾಶ ನೀಡಿದ್ದು ಕಾಂಗ್ರೆಸ್. ಸಮ್ಮಿಶ್ರ ಸರಕಾರ ಪಥನವಾಗಿದ್ದು ನಿಮ್ಮ ಅಸಮರ್ಥತೆಯಿಂದ. ಉಂಡ ಮನೆಯ ಗಳ ಎಣಿಸುವ ಬುದ್ಧಿ ಬಿಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News