ಮರಾಠ ಪ್ರಾಧಿಕಾರ ಖಂಡಿಸಿ ಕರ್ನಾಟಕ ಬಂದ್ ಹಿನ್ನೆಲೆ: ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Update: 2020-12-05 15:51 GMT

ಮಂಡ್ಯ, ಡಿ.5: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಂದ್ರ ಮಂಡ್ಯ ನಗರ, ತಾಲೂಕು ಕೇಂದ್ರಗಳಾದ ಮದ್ದೂರು, ಕೆ.ಆರ್.ಪೇಟೆ, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಇತರೆ ವಾಣಿಜ್ಯ ಕೇಂದ್ರಿತ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಮಂಡ್ಯ ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ವಿಶ್ವೇಶ್ವರಯ್ಯ ಪ್ರತಿಮೆ ಎದುರು, ಸಂಜಯ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿಗಳ ಎದುರು ಕೆಲವು ಸಂಘಟನೆಗಳು ಜಂಟಿಯಾಗಿ, ಮತ್ತೆ ಕೆಲವರು ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಶಾಸಕರಾದ ಬಸವನ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಅವರು ಪ್ರತಿಕೃತಿಗಳನ್ನು ದಹಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಡಿ ಜಿಲ್ಲೆಯಲ್ಲಿ ಮರಾಠಿಗರ ಪುಂಡಾಡಿಕೆ ಮುಂದುವರಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಸರಕಾರ ಪುಂಡಾಡಿಕೆ ಮಟ್ಟಹಾಕುವ ಬದಲು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಪುಂಡಾಡಿಕೆಗೆ ಉತ್ತೇಜನ ನೀಡಿದೆ ಎಂದು ಅವರು ಪ್ರತಿಭಟನಾಕಾರರು ಕಿಡಿಕಾರಿದರು.

ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವು ಕನ್ನಡ ಅಭಿವೃದ್ಧಿ ಸಂಸ್ಥೆಗಳಿಗೆ ಸಾಕಷ್ಟು ಅನುದಾನ ನೀಡದೆ, ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ನೀಡುವ ಮೂಲಕ ಬಿಜೆಪಿ ಸರಕಾರ ಮತ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕೂಡಲೇ ರಾಜ್ಯ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶ ಹಿಂದಕ್ಕೆ ಪಡೆಯಬೇಕು. ಕನ್ನಡದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕು. ಕನ್ನಡ ನಾಡಿನ ಸಂಸ್ಕøತಿ, ಪರಂಪರೆ ಉಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್‍ಗೆ ಬಲವಂತ ಮಾಡದೆ ಸಂಘಟನೆಗಳು ಪ್ರತಿಭಟನೆಗೆ ಸೀಮಿತವಾಗಿದ್ದವು. ಅಂಗಡಿಮುಂಗಟ್ಟುಗಳು, ಸರಕಾರಿ ಕಚೇರಿಗಳು ತೆರೆದಿದ್ದವು. ಬಸ್, ಮತ್ತಿತರ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಲಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ, ಶಿವರಾಮೇಗೌಡ, ಇತರ ಬಣಗಳು, ಕನ್ನಡ ಸೇನೆ ಕರ್ನಾಟಕ, ಕರುನಾಡ ಸೇವಕರು, ಜಯಕರ್ನಾಟಕ, ಕದಂಬಸೈನ್ಯ, ಇತರೆ ಕನ್ನಡಪರ ಮತ್ತು ರೈತ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News