ಪುರಸಭೆ ಸದಸ್ಯೆಗೆ ಗರ್ಭಪಾತ: ಬಿಜೆಪಿ ಶಾಸಕ ಸಿದ್ದು ಸವದಿ ಬಂಧನಕ್ಕೆ ಕಾಂಗ್ರೆಸ್ ಪಟ್ಟು

Update: 2020-12-05 16:33 GMT

ಬಾಗಲಕೋಟೆ, ಡಿ.5: ಪುರಸಭಾ ಸದಸ್ಯೆ ಚಾಂದಿನಿ ನಾಯಕ್ ಮೇಲೆ ಬಿಜೆಪಿ ಶಾಸಕ ಸಿದ್ದು ಸವದಿ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಶನಿವಾರ ನಗರದ ಬನಹಟ್ಟಿ ಪಟ್ಟಣದಲ್ಲಿ ಜಮಾಯಿಸಿದ ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕ ಸಿದ್ದು ಸವದಿ ಅವರನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಹಿಳೆಯರ ಮೇಲೆ ಯಾರೇ ದೌರ್ಜನ್ಯ ನಡೆಸಲಿ, ತ್ವರಿತವಾಗಿ ಕಾನೂನು ಕ್ರಮಕ್ಕೆ ಗೃಹ ಇಲಾಖೆ ಮತ್ತು ರಾಜ್ಯ ಸರಕಾರ ಮುಂದಾಗಬೇಕು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಬಂದಿಲ್ಲ. ಬದಲಾಗಿ ರಾಜ್ಯದ ಮೂವರು ಹೆಣ್ಣು ಮಕ್ಕಳಿಗೆ ಆಗಿರುವ ದೌರ್ಜನ್ಯ ಹಾಗೂ ಮಾನವ ಕುಲಕ್ಕೆ ಆಗಿರುವ ಅಪಮಾನದ ವಿರುದ್ಧವಾಗಿ, ನೊಂದ ಹೆಣ್ಣು ಮಕ್ಕಳ ಜತೆ ನಾವಿದ್ದೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇವೆ ಎಂದರು.

ಹೆಣ್ಣು ಕುಟುಂಬದ ಕಣ್ಣು. ನಾವು ಪ್ರತಿ ಗ್ರಾಮಕ್ಕೆ ಹೋದರೂ ಅಲ್ಲಿ ಗ್ರಾಮ ದೇವತೆ ಕಾಣುತ್ತೇವೆ. ಆ ತಾಯಿಗೆ ಗೌರವ ತೋರುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಲ್ಲಿ ನಡೆದಿರುವ ಅಮಾನವೀಯ ಕೃತ್ಯ ಅಪಮಾನ ತರುವಂಥದ್ದು. ಇದನ್ನು ನಾವೆಲ್ಲರೂ ಖಂಡಿಸಬೇಕು ಎಂದು ತಿಳಿಸಿದರು.

ದುಶ್ಶಾಸನನಂತೆ ಅಮಾನವೀಯವಾಗಿ ನಡೆದುಕೊಂಡವರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತೇವೆ. ಇದನ್ನು ಇಲ್ಲಿಗೇ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಉದ್ದಗಲಕ್ಕೂ ಹಾಗೂ ವಿಧಾನಸೌಧದಲ್ಲೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಪ್ಪಾ ಅಮರನಾಥ್, ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ, ಉಮಾಶ್ರೀ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಆನಂದ ನ್ಯಾಮಗೌಡ, ಕಾಂಗ್ರೆಸ್ ಬಾಗಲಕೋಟೆ ಜಿಲ್ಲಾಧ್ಯಕ್ಷ ನಂಜಯ್ಯನಮಠ, ಮಾಜಿ ಶಾಸಕ ಜಿ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News