ಟರ್ಫ್‌ಕ್ಲಬ್ ಆನ್‍ಲೈನ್ ಬೆಟ್ಟಿಂಗ್ ಗೆ ಅನುಮತಿ: ರಾಜ್ಯ ಸರಕಾರದ ಕ್ರಮ 'ಅಸಂಬದ್ಧ' ಎಂದ ಹೈಕೋರ್ಟ್

Update: 2020-12-05 16:50 GMT

ಬೆಂಗಳೂರು, ಡಿ.5: ಟರ್ಫ್‌ಕ್ಲಬ್ಗೆ ಆನ್‍ಲೈನ್ ಬೆಟ್ಟಿಂಗ್ ನಡೆಸಲು ಅನುಮತಿ ನೀಡಿರುವ ರಾಜ್ಯ ಸರಕಾರದ ಕ್ರಮಕ್ಕೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕ್ರಮ ಅಸಂಬದ್ಧ ಎಂದು ತಿಳಿಸಿದೆ.

ಶನಿವಾರ ಸಿ.ಗೋಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠವು, ಯಾವ ಆಧಾರದಲ್ಲಿ ಟರ್ಫ್ ಕ್ಲಬ್ ಆನ್‍ಲೈನ್ ಬೆಟ್ಟಿಂಗ್‍ಗೆ ಅನುಮತಿ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಸರಕಾರಕ್ಕೆ ಸೂಚಿಸಿದೆ.

ವಾದ ಮಂಡಿಸಿದಾಗ ಸರಕಾರದ ಪರ ವಕೀಲರ ಸಮಜಾಯಿಷಿ ಒಪ್ಪದ ಪೀಠ, ಸರಕಾರದ ಕಾನೂನಿನಲ್ಲಿಯೇ ಅವಕಾಶವಿಲ್ಲದಿದ್ದರೂ ಬೆಟ್ಟಿಂಗ್‍ಗೆ ಅನುಮತಿ ನೀಡಿರುವ ಕ್ರಮ ಅಸಂಬದ್ಧ. ಅಲ್ಲದೆ, ಆನ್‍ಲೈನ್ ಬೆಟ್ಟಿಂಗ್‍ಗೆ ಡಿ.16ರಿಂದ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಸರಕಾರಕ್ಕೆ ಆನ್‍ಲೈನ್ ಬೆಟ್ಟಿಂಗ್‍ಗೆ ಅನುಮತಿ ನೀಡಲು ಯಾವುದೇ ಅಧಿಕಾರವಿಲ್ಲ. ಹೀಗಾಗಿ ರಾಜ್ಯ ಸರಕಾರ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿತು.

ಒಂದು ವೇಳೆ ಅನುಮತಿ ನೀಡಿದರೆ ಅದು ಕಾನೂನುಬಾಹಿರ ಕಾರ್ಯಕ್ಕೆ ಕಾನೂನು ಬದ್ಧತೆ ನೀಡಿದಂತಾಗುತ್ತದೆ. ಹೀಗಾಗಿ, ಯಾವ ಕಾನೂನಿನ ಆಧಾರದಲ್ಲಿ ಅನುಮತಿ ನೀಡಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಪೀಠವೂ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News