ವಾಯುವಜ್ರದಲ್ಲಿ ಸಂಚರಿಸುವವರಿಗೆ ಆಸನ ಕಾಯ್ದಿರಿಸುವಿಕೆಗೆ ಅವಕಾಶ

Update: 2020-12-05 17:50 GMT

ಬೆಂಗಳೂರು, ಡಿ.5: ಹವಾನಿಯಂತ್ರಿತ ವಾಯುವಜ್ರ ಬಸ್‍ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲು ಕೆಎಸ್ಆರ್‌ಟಿಸಿ ನಿಗಮದ ಅವತಾರ್ ತಂತ್ರಾಂಶದಲ್ಲಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಬೆಂಗಳೂರು ನಗರದ ವಿವಿಧ ಸ್ಥಳಗಳಿಂದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (164 ಸುತ್ತುವಳಿಗಳು) ಹಾಗೂ ಕೆಂಪೇಗೌಡ ಅಂತರ್‍ರಾಷ್ಟ್ರಿಯ ವಿಮಾನ ನಿಲ್ದಾಣದಿಂದ ನಗರದ ವಿವಿಧ ಸ್ಥಳಗಳಿಗೆ (171 ಸುತ್ತುವಳಿಗಳು) ಪ್ರತಿನಿತ್ಯ ಒಟ್ಟು 335 ಏಕಮುಖ ಸುತ್ತುವಳಿಗಳ ಮೂಲಕ ಹವಾನಿಯಂತ್ರಿತ ವಾಯುವಜ್ರ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಮುಂಗಡವಾಗಿ ಆಸನಗಳನ್ನು ಕೆಎಸ್ಆರ್‌ಟಿಸಿ ಬುಕ್ಕಿಂಗ್ ಕೌಂಟರ್ ಗಳು, ಆನ್‍ಲೈನ್ www.ksrtc.in ಕೆಎಸ್ಸಾರ್ಟಿಸಿ ಮೊಬೈಲ್ ಆಪ್ ಹಾಗೂ ಅಧಿಕೃತ ಖಾಸಗಿ ಏಜೆನ್ಸಿಗಳ ಮೂಲಕ ಕಾಯ್ದಿರಿಸಬಹುದು. ಪ್ರಯಾಣಿಕರು ಪ್ರಯಾಣಿಸುವ ಸಮಯದಲ್ಲಿ ಚಾಲ್ತಿಯಲ್ಲಿರುವ ಮುದ್ರಿತ ಟಿಕೇಟ್, ಇ-ಟಿಕೇಟ್, ಬುಕ್ಕಿಂಗ್ ಎಸ್‍ಎಂಎಸ್ ಹೊಂದಿರಬೇಕು.

ಒಂದೇ ಗುಂಪಿನ 4 ಅಥವಾ ಅಧಿಕ ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿದಲ್ಲಿ, ಪ್ರಯಾಣದರದಲ್ಲಿ ಶೇ.5 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಮ್ಮೆಲೇ ಮುಂಗಡವಾಗಿ ಆಸನವನ್ನು ಕಾಯ್ದಿರಿಸಿದಲ್ಲಿ, ಹಿಂದಿರುಗುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News