ಪ್ರಚೋದನಕಾರಿ ಹೇಳಿಕೆ ಮೂಲಕ ಈಶ್ವರಪ್ಪ ಆತಂಕ ಸೃಷ್ಟಿ ಮಾಡುತ್ತಿದ್ದಾರೆ: ಎಸ್‍ಡಿಪಿಐ

Update: 2020-12-05 17:54 GMT

ಶಿವಮೊಗ್ಗ, ಡಿ.05: ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ನವರು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ಉರಿಯುವ ಬೆಂಕಿ ತುಪ್ಪ ಸುರಿಯುವ ಕೆಲಸವನ್ನು ಸಚಿವರು ಕೈ ಬಿಡಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಖಾನ್, ಬಜರಂಗದಳ ಕಾರ್ಯಕರ್ತರ ನಾಗೇಶ್ ಎಂಬುವರ ಮೇಲೆ ಹಲ್ಲೆ ನಡೆದ ನಂತರದ ಗಲಾಟೆಗೆ ಪ್ರಚೋದನೆ ನೀಡಿರುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನಾಗೇಶ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವುದನ್ನು ತನಿಖೆಗೆ ಒಳಪಡಿಸಬೇಕು. ಆದರೆ ಆನಂತರ ಆಗಿರುವ ಅಹಿತಕರ ಘಟನೆಗೆ ಬಜರಂಗದಳ ನಾಯಕರ ಪ್ರಚೋದನೆಯೇ ಕಾರಣ ಎಂದು ಆರೋಪಿಸಿದರು.

ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಇಡಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಸ್ಥಳೀಯ ಬಿಜೆಪಿ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಜರಂಗದಳ ನಾಯಕರು ಗುಂಪು ಕಟ್ಟಿಕೊಂಡು ರಾಮಣ್ಣಶ್ರೇಷ್ಠಿ ಪಾರ್ಕ್ ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದರೂ ಕೂಡ ಪೊಲೀಸರು ಸುಮ್ಮನಿದ್ದರು. ಶಾಂತಿಯನ್ನು ಕಾಪಾಡಬೇಕಾದ ಸಂಸದರು ಬೇಜವಾಬ್ದಾರಿ ಹೇಳಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಪ್ರಚೋದನಾಕಾರಿ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದರು. ಆದರೆ ಪೊಲೀಸರು ಮಾತ್ರ ಸುಮ್ಮನಿದ್ದರು. ಏಕೆಂದರೆ ಇವರು ರಾಜಕಾರಣಿಗಳು ಎಂಬುದೇ ಕಾರಣ ಎಂದರು.

ಬಿಜೆಪಿ ತನ್ನ ಕೋಮು ರಾಜಕಾರಣವನ್ನು ಪೊಲೀಸ್ ಇಲಾಖೆಯನ್ನಿಟ್ಟುಕೊಂಡು ಮುಂದವರಿಸುತ್ತಲೇ ಇದೆ. ಕೆಲವು ಕಿಡಿಗೇಡಿಗಳು ಮಾಡಿರುವ ಕೆಲಸಕ್ಕೆ ಇಡೀ ಮುಸ್ಲಿಂ ಸಮುದಾಯವನ್ನು ಟೀಕಿಸುವುದು ಮತ್ತು ಹಲ್ಲೆ ಮಾಡುವುದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ. ಗಲಾಟೆಯ ನಂತರವೂ ಕೆಲವರು ಹಲ್ಲೆ ಮಾಡಿದ್ದಾರೆ. ಇಂತಹ ಗಲಭೆಕೋರರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದರು.

ಪೊಲೀಸ್ ಇಲಾಖೆ ಒಂದುಕಣ್ಣಿಗೆ ಸುಣ್ಣ ಮತ್ತೊಂದು ಬೆಣ್ಣೆ ಎಂದು ಮಾಡಬಾರದು. ಯಾರೇ ಗಲಾಟೆ ಮಾಡಿರಲಿ ಯಾರೇ ಹಲ್ಲೆ ಮಾಡಿರಲಿ ಎಲ್ಲ ಕಿಡಿಗೇಡಿಗಳನ್ನು ಬಂಧಿಸಬೇಕು. ಆಸ್ತಿಪಾಸ್ತಿ ನಷ್ಟವಾಗಿರುವವರಿಗೆ, ಗಾಯಾಳುಗಳಿಗೆ ಚಿಕಿತ್ಸೆಯ ಜೊತೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಪೀಸ್ ಆರ್ಗನೈಜೆಷನ್ ಅಧ್ಯಕ್ಷ ರಿಯಾಝ್ ಅಹಮ್ಮದ್, ಪ್ರಮುಖರಾದ ಅಲ್ಲಾಭಕ್ಷ್, ಇಮ್ರಾನ್ ಅಹಮ್ಮದ್, ಜಿಲಾನ್ ಖಾನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News