ಪೊಲೀಸರ ಮೇಲೆ ಹಲ್ಲೆ: ಕಾಲಿಗೆ ಗುಂಡಿಕ್ಕಿ ಕೊಲೆ ಆರೋಪಿಯ ಬಂಧನ

Update: 2020-12-06 04:24 GMT

ತುಮಕೂರು, ಡಿ.6: ಕೊಲೆ ಪ್ರಕರಣದ ಆರೋಪಿಯೋರ್ವ ಬಂಧನಕ್ಕೆ ಯತ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ತುಮಕೂರು ಗ್ರಾಮಾಂತರ ಸರಹದ್ದಿನ ಅಜ್ಜಪ್ಪನಹಳ್ಳಿ ಎಂಬಲ್ಲಿ ರವಿವಾರ ಬೆಳಗ್ಗಿನ ಜಾವ ನಡೆದಿದೆ.

ಗುಬ್ಬಿ ತಾಲೂಕಿನ ಗೌರಿ ಪುರದ ರೌಡಿಶೀಟರ್ ವಿಕಾಸ್ ಅಲಿಯಾಸ್ ವಿಕ್ಕಿ (24) ಗಾಯಗೊಂಡಿರುವ ಆರೋಪಿ. ಈತನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಕ್ಕಿಯು ಇತ್ತೀಚೆಗೆ ನಗರದಲ್ಲಿ ನಡೆದ ರೌಡಿಶೀಟರ್ ಉಚ್ಚೆ ಮಂಜ ಕೂಲೆ ಪ್ರಕರಣದ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧನಕ್ಕೆ ಮುಂದಾದಾಗ ಈ ಘಟನೆ ನಡೆದಿದೆ.

ಉಚ್ಚೆ ಮಂಜ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಸಿಕೃಷ್ಣ ಮೂರು ತಂಡಗಳನ್ನು ರಚಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಸಂಬಂಧ ರವಿವಾರ ಬೆಳಗಿನ ಜಾವ 5:30ರ ಸುಮಾರಿಗೆ ಒಬ್ಬ ಆರೋಪಿಯು ತುಮಕೂರು ಗ್ರಾಮಾಂತರ ಸರಹದ್ದಿನ ಅಜ್ಜಪ್ಪನಹಳ್ಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಅಲ್ಲಿಗೆ ತೆರಳಿದ್ದರು.

ತಿಲಕ್ ಪಾರ್ಕ್ ಠಾಣೆಯ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಲು ಮುಂದಾದಾಗ, ಆರೋಪಿಯು ಎಎಸ್ಸೈ ಪರಮೇಶ್ವರ ರವರಿಗೆ ತನ್ನ ಬಳಿಯಿದ್ದ ಡ್ರಾಗರ್ ನಿಂದ ಹಲ್ಲೆ ಮಾಡಿದನೆನ್ನಲಾಗಿದೆ. ಇದರಿಂದ ಪರಮೇಶ್ವರ ಅವರ ಎಡಗೈ ತೋಳಿಗೆ ಗಂಭಿರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News