×
Ad

ಡಿ.8ರ 'ಭಾರತ್ ಬಂದ್' ಕರೆಗೆ ರಾಜ್ಯದ ರೈತ, ಕಾರ್ಮಿಕ, ದಲಿತ, ಕನ್ನಡ ಪರ ಸಂಘಟನೆಗಳ ಬೆಂಬಲ

Update: 2020-12-06 19:16 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 6: ಕೇಂದ್ರದ ಮೂರು ಕೃಷಿ ಕಾನೂನುಗಳು ಮತ್ತು ವಿದ್ಯುತ್ ಮಸೂದೆ-2020 ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಡಿ.8ರ 'ಅಖಿಲ ಭಾರತ ಬಂದ್'ಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ರೈತ ಸಂಘ-ಹಸಿರು ಸೇನೆ, ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ, ಎಐಎಂಎಸ್‍ಎಸ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿವೆ.

ರೈತರ ಸಂಪೂರ್ಣ ಬೆಂಬಲ: ದಿಲ್ಲಿಯಲ್ಲಿ ರೈತರು ಕೊರೆಯುವ ಚಳಿಯಲ್ಲಿ 10 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರಕಾರ ಚಳುವಳಿಯನ್ನು ಹತ್ತಿಕ್ಕುವ ಕುತಂತ್ರದ ಮಾರ್ಗವನ್ನ ಹುಡುಕುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತನ ಬದುಕನ್ನು ನಾಶಮಾಡುವ ಕಾನೂನುಗಳನ್ನು ಜಾರಿಗೆ ತಂದಿದೆ, ಈ ಹೋರಾಟ ರೈತರ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಭಾರತ ಬಂದ್‍ಗೆ ರಾಜ್ಯದ ರೈತರು ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಗಿದೆ ಎಂದು ಐಕ್ಯ ಹೋರಾಟ ಸಮಿತಿ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ, ಕಾರ್ಮಿಕರ ಕಾಯ್ದೆ ತಿದ್ದುಪಡಿ ಮಾಡಿ ಕಾರ್ಪೋರೇಟರ್ ಕಂಪೆನಿನಿಗಳ ಮರ್ಜಿಗೆ ಒಳಗಾಗಿ ಖಾಸಗಿಕರಣ ಮಾಡುತ್ತಿದ್ದಾರೆ, ಇದನ್ನು ವಿರೋಧಿಸಿ ದೇಶಾದ್ಯಂತ ರೈತರು ಬೀದಿಗಿಳಿದಿದ್ದಾರೆ. ಪ್ರಧಾನಿ ಮೋದಿ ದೇಶ ನಾಶಕ್ಕೆ ಮುಂದಾಗಿದ್ದು, ಹಳ್ಳಿ-ಹಳ್ಳಿಗಳಲ್ಲಿ ಚಳುವಳಿ ಮಾಡುವ ಮೂಲಕ ಭಾರತ್ ಬಂದ್ ಯಶಸ್ವಿಗೊಳಿಸಿ ರೈತರ ಶಕ್ತಿಯನ್ನು ತೋರಿಸಬೇಕು ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.

ವಿಧಾನಸೌಧಕ್ಕೆ ಮುತ್ತಿಗೆ: ರೈತ ಸಂಘಟನೆಗಳು ಡಿ.8ರಂದು ಕರೆ ನೀಡಿರುವ ‘ಭಾರತ್ ಬಂದ್’ ಬೆಂಬಲಿಸಲಾಗುವುದು ಎಂದಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್,  ಡಿ.9ಕ್ಕೆ ರೈತರು ಹಸಿರು ಶಾಲು ಮತ್ತು ಬಾರುಕೋಲ್‍ನೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹೊಸ ಕೃಷಿ ಕಾನೂನುಗಳನ್ನು ಜಾರಿಗೊಳಿಸುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದುದರಿಂದ ಪ್ರತಿ ತಾಲೂಕು ಮಟ್ಟದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಪ್ರತಿಭಟನೆಗೆ ಸಾರ್ವಜನಿಕರಿಂದ ಬೆಂಬಲ ದೊರೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಕಾನೂನು ತಿದ್ದುಪಡಿ ಹಿಂಪಡೆಯಿರಿ: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ರೈತ, ಕಾರ್ಮಿಕ, ಜನವರೋಧಿ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳ ಬಂದ್‍ಗೆ ರಾಜ್ಯದಲ್ಲಿನ ಎಲ್ಲ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಿಳಿಸಿದೆ.

'ಕೇಂದ್ರ ಸರಕಾರ ಬಡ ಕೂಲಿ ಕಾರ್ಮಿಕರು ಮತ್ತು ರೈತರ ಪರವಾಗಿದೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕೇಂದ್ರ ಮುಕ್ತವಾಗಿದೆ. ರೈತರು ತಮ್ಮ ಹೋರಾಟವನ್ನು ಹಿಂಪಡೆಯಬೇಕು. ಡಿ.9ಕ್ಕೆ ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು'

-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News