ನಮಗೆ ಶಿಕ್ಷಣ ನೀಡದವರ ಪೂಜೆ ಮಾಡುವುದು ಬೇಡ: ಸತೀಶ್ ಜಾರಕಿಹೊಳಿ

Update: 2020-12-06 15:40 GMT

ಬೆಳಗಾವಿ, ಡಿ. 6: 'ಯಾರು ನಮಗೆ ಶಿಕ್ಷಣವನ್ನೆ ನೀಡಿಲ್ಲವೂ, ಅವರನ್ನು ಪೂಜೆ ಮಾಡುವುದು ಬೇಡ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಗೋಕಾಕ ನಗರದ ಮರಾಠ ಸಮಾಜ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಅಂಗವಾಗಿ ಆಯೋಜಿಸಿದ್ದ ಮೌಢ್ಯ ವಿರೋಧಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಶೋಷಿತ ಸಮುದಾಯವಾದ ನಮಗೆ, ಶಿಕ್ಷಣವನ್ನೇ ನೀಡದ, ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಅವಕಾಶವೇ ಕಲ್ಪಿಸದವರಿಗೆ ನಾವು ಪೂಜೆ ಮಾಡುವುದು ಸರಿಯಲ್ಲ. ಬದಲಾಗಿ, ನಮ್ಮ ಪರಿವರ್ತನೆ, ಏಳಿಗೆಗಾಗಿ ಶ್ರಮಿಸಿದವರಿಗೆ ಹಾಗೂ ನಮಗಾಗಿ ಸಂಘರ್ಷವನ್ನು ಮಾಡಿದವರನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಈ ಭೂಮಿಯ ಮೇಲೆ ನಮಗೆ ಸ್ವಾತಂತ್ರ್ಯವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕೆ ಹೊರತು ನಮ್ಮ ಮೇಲೆ ಯಾವುದೇ ಧಾರ್ಮಿಕ ಆಚರಣೆಗಳನ್ನು ಹೇರಿ ತೊಂದರೆ ನೀಡಬೇಡಿ. ಅಲ್ಲದೆ, ನಾವು ನಂಬಿಕೆಗಳ ವಿರೋಧಿಗಳಲ್ಲ. ಮೂಢನಂಬಿಕೆಗಳ ವಿರೋಧಿಗಳು, ಯಾರನ್ನು ಸಹ ಆಚರಣೆ ನೆಪದಲ್ಲಿ ಮೌಢ್ಯಕ್ಕೆ ತಳ್ಳಿದರೆ ಸಹಿಸುವುದಿಲ್ಲ ಎಂದು ತಿಳಿಸಿದರು.

ಸಂವಿಧಾನ ಬದಲಾವಣೆ ಎನ್ನುವುದು ಎಂದಿಗೂ ಆಗಬಾರದು. ಈ ನಿಟ್ಟಿನಲ್ಲಿ ಕೆಟ್ಟ ಶಕ್ತಿಗಳ ವಿರುದ್ಧ ಯುವ ಪೀಳಿಗೆ ಹೋರಾಟ ನಡೆಸಬೇಕು. ಜೊತೆಗೆ, ಸಂವಿಧಾನ ಕುರಿತು ಅದರಲ್ಲಿನ ಮಹತ್ವದ ಅಂಶಗಳ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದ ಅವರು, ಸರಿ ಸುಮಾರು 4 ಸಾವಿರ ವರ್ಷಗಳಿಂದ ದೌರ್ಜನ್ಯದ ವ್ಯವಸ್ಥೆ ವಿರುದ್ಧ ನಾವು ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಸತೀಶ್ ಜಾರಕಿಹೊಳಿ ನುಡಿದರು.

ಅಂಬೇಡ್ಕರ್ ದೇವಾಲಯ ಹುನ್ನಾರ

ಯಾರು ಈ ವ್ಯವಸ್ಥೆ, ಕೆಟ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದರೂ, ಅವರ ಹೆಸರಿನಲ್ಲಿ ದೇವಾಲಯ ಕಟ್ಟಿರುವ ಉದಾಹರಣೆ ಸಾಕಷ್ಟಿದೆ. ಇದೇ ರೀತಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ದೇವಾಲಯೊಂದನ್ನು ನಿರ್ಮಿಸಿ ಅಂಧಭಕ್ತರನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದ್ದು, ನಾವು ಎಚ್ಚರ ವಹಿಸಬೇಕು.

-ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News