×
Ad

ರಾಜಯಕೀಯದಲ್ಲಿ ನಾನು ಇನ್ನೂ ಅಂಬೆಗಾಲಿಡುತ್ತಿದ್ದೇನೆ: ಸಚಿವ ಎಸ್.ಟಿ.ಸೋಮಶೇಖರ್

Update: 2020-12-06 22:46 IST

ಮೈಸೂರು,ಡಿ.6: ದಯವಿಟ್ಟು ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ. ರಾಜಕೀಯದಲ್ಲಿ ನಾನು ಮುಗ್ದ, ಇನ್ನೂ ಅಂಬೆಗಾಲಿಡುತ್ತಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಅಂಗವಾಗಿ ನಗರದ ಟೌನ್‍ಹಾಲ್ ಬಳಿಯಿರುವ ಅಂಬೇಡ್ಕರ್ ಪ್ರತಿಮೆಗೆ ರವಿವಾರ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಯಡಿಯೂರಪ್ಪ ಅವರು ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾದ ಬಗ್ಗೆ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ನಾನಿನ್ನೂ ಬೆಳೆಯುವುದಿದೆ. ಈಗಷ್ಟೇ ಅಂಬೆಗಾಲಿಡುತ್ತಿದ್ದೇನೆ. ರಾಜಕೀಯ ವಿಚಾರಗಳಿಗೆ ನನ್ನನ್ನು ಎಳೆಯಬೇಡಿ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಆರೋಪ ಪ್ರತ್ಯಾರೋಪ ಕುರಿತು ಪ್ರತಿಕ್ರಿಯಿಸಿ, ಅವರಿಬ್ಬರೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ರಾಜಕೀಯದಲ್ಲಿ ಎಲ್ಲವನ್ನೂ ಅನುಭವಿಸಿದ್ದಾರೆ. ಈಗ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಮಾಡುತ್ತಿದ್ದು, ಅದು ಅಷ್ಟಕ್ಕೇ ಸೀಮಿತವಾಗಿದೆ. ಈ ಬಗ್ಗೆ ನಾನು ಮಾತನಾಡಲ್ಲ ಎಂದರು.

ಆರ್.ಅಶೋಕ್ ಅವರ ನೇತೃತ್ವದಲ್ಲಿ ಈಗಾಗಲೇ ಐದು ಜಿಲ್ಲೆಗಳಿಗೆ ಭೇಟಿ ನೀಡಿದ್ದೇವೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದೇವೆ. ಗ್ರಾಮ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಲೋಕಸಭೆ, ವಿಧಾನಸಭೆ ಚುನಾವಣೆ ಗೆಲ್ಲುವುದು ಸುಲಭ. ಆದರೆ, ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲುವುದು ಕಷ್ಟ. ಅಭ್ಯರ್ಥಿ ಜನಸ್ಪಂದನೆ ಮೇಲೆ ಗೆಲುವು ನಿಶ್ಚಿತವಾಗುತ್ತಿದೆಯೇ ಹೊರತು ಹಣಕಾಸಿನಿಂದಲ್ಲ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು ಎನ್ನವುದು ಗುರಿ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News