ಓ ಮೆಣಸೇ...

Update: 2020-12-06 19:30 GMT

ತಾನು 2023ರವರೆಗೆ ಯಾವುದೇ ಗ್ರೂಪಿಸಂ ಮಾಡುವುದಿಲ್ಲ -ರಮೇಶ್ ಜಾರಕಿಹೊಳಿ, ಸಚಿವ
ಬಿಜೆಪಿಯಲ್ಲಿ ಗ್ರೂಪಿಸಂ ಮಾಡುವುದಕ್ಕೆ ಬೇರೆಯೇ ಗ್ಯಾಂಗ್‌ಗಳಿವೆ.


ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರಕಾರ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನ್ನಪಟ್ಟಣವನ್ನು ಪ್ರತ್ಯೇಕ ದೇಶವಾಗಿ ಘೋಷಿಸುವ ಸಾಧ್ಯತೆಗಳಿವೆಯೇ?


40 ವರ್ಷಗಳ ರಾಜಕೀಯ ಅನುಭವ ಇರುವ ನಾನು ಮಂತ್ರಿಗಿರಿಗಾಗಿ ದಿಲ್ಲಿಯಲ್ಲಿ ಅಲೆದಾಡುವುದು ಸರಿ ಕಾಣಲ್ಲ -ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಸರಿಕಾಣಲ್ಲ ಅಂತಲೇ ಕೋರ್ಟ್ ನಿಮ್ಮ ವಿರುದ್ಧ ತೀರ್ಪು ನೀಡಿರುವುದು.


ಶಿವಸೇನೆಯು ಹಿಂದುತ್ವವನ್ನು ಬಿಟ್ಟಿದೆ. ನಮ್ಮ ಹಿಂದುತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ -ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ
ಹಿಂದುತಕ್ಕಿಂತ ಬಂಧುತ್ವ ಒಳ್ಳೆಯದು ಎನ್ನುವುದು ಅವರಿಗೆ ಮನವರಿಕೆಯಾಗಿರಬೇಕು.


5 ತಿಂಗಳಿನಿಂದ ನಾನು ಮಂತ್ರಿಗಿರಿಗಾಗಿ ಕಾಯುತ್ತಿದ್ದೇನೆ. ಒಟ್ಟಾರೆ ನನ್ನ ಹಣೆಬರಹ ಸರಿಯಿಲ್ಲ -ಎಂ.ಟಿ.ಬಿ.ನಾಗರಾಜ್, ವಿ.ಪ. ಸದಸ್ಯ
ಹಣ-ಬರಹದ ಪರಿಣಾಮವಿರಬೇಕು.


ಲವ್ ಜಿಹಾದ್ ಕಾಯ್ದೆ ಜಾರಿಗೆ ತರುವ ಮೊದಲು ಆ ಪಕ್ಷದ ಯಾವ ನಾಯಕರ ಮಕ್ಕಳು ಯಾರನ್ನು ಲವ್ ಮಾಡಿಕೊಂಡಿದ್ದಾರೆ, ಯಾರನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ನೋಡಲಿ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ದೇಶದ ಯಾವುದೇ ಕಾನೂನು ಬಿಜೆಪಿಯ ನಾಯಕರಿಗೆ ಅನ್ವಯವಾಗುವುದಿಲ್ಲವಂತೆ.


ಭಾರತದಿಂದ ಕಳವಾಗಿರುವ ಅಮೂಲ್ಯ ವಸ್ತುಗಳನ್ನು ದೇಶಕ್ಕೆ ತರಲು ಶ್ರಮಿಸುತ್ತಿದ್ದೇವೆ -ನರೇಂದ್ರ ಮೋದಿ, ಪ್ರಧಾನಿ
ನೀವು ಅಗ್ಗದ ಬೆಲೆಗೆ ಮಾರಾಟ ಮಾಡಿರುವ ಈ ದೇಶದ ಮರ್ಯಾದೆಯನ್ನು ಹೇಗೆ ವಾಪಸ್ ತರುತ್ತೀರಿ?


ನಾನು ದೇವರ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ -ಶೋಭಾ ಕರಂದ್ಲಾಜೆ, ಸಂಸದೆ
ನಿಮಗೆ ದೇವರಿರುವುದೇ ರಾಜಕೀಯ ಮಾಡುವುದಕ್ಕಾಗಿ ಎಂದು ಜನ ನಂಬಿದ್ದಾರೆ.


ಒಂದು ಬಾರಿ ತಾಳಿ ಕಟ್ಟಿಸಿಕೊಂಡ ಮೇಲೆ ನಾವು ಆ ಮನೆ (ಬಿಜೆಪಿ)ಯ ಸದಸ್ಯರೇ -ಬಿ.ಸಿ.ಪಾಟೀಲ್, ಸಚಿವ
ನೀವು ಈ ಹಿಂದೆ ಕಟ್ಟಿಸಿಕೊಂಡ ಹಲವು ತಾಳಿಗಳನ್ನು ಹರಿದುಕೊಂಡವರಲ್ಲವೇ?


ಶಾಂತಿ ಇದ್ದಲ್ಲಿ ಮಾತ್ರ ವ್ಯಾಪಾರ ಅಭಿವೃದ್ಧಿ ಸಾಧ್ಯ -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಬಹುಶಃ ಸಂಘಪರಿವಾರ ಅದಕ್ಕಾಗಿಯೇ ಶಾಂತಿಯನ್ನು ಕೆಡಿಸುತ್ತಿರಬೇಕು.


ಸರ್ವ ಸಂಘ ಪರಿತ್ಯಾಗಿಗಳಾಗಬೇಕಾದ ಸ್ವಾಮೀಜಿಗಳು ಜಾತಿವಾದಿಗಳಾಗಿದ್ದಾರೆ -ಶ್ರೀನಿವಾಸ ಪ್ರಸಾದ್, ಸಂಸದ
ಅಂಬೇಡ್ಕರ್ ಹಿಂದೆ ಹೋಗುವ ಬದಲು ಸ್ವಾಮೀಜಿಗಳ ಹಿಂದೆ ಹೋಗುವ ತಪ್ಪೇಕೆ ಮಾಡಿದಿರಿ?


ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಖಾಲಿಸ್ತಾನ್ ಉಗ್ರರು, ನಕ್ಸಲರು -ಅಮಿತ್ ಮಾಳವೀಯ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ
ಇತ್ತೀಚೆಗೆ ದಿಲ್ಲಿಯಲ್ಲಿ ಅಮಾಯಕರನ್ನು ಕೊಂದ ಸಂಘ ಪರಿವಾರದ ಕಾರ್ಯಕರ್ತರೆಲ್ಲರಿಗೆ ರೈತರೆಂದು ಪ್ರಮಾಣ ಪತ್ರ ಕೊಡಿಸಿ.


ಚುನಾವಣೆ ಎಂದರೆ ಏನು ಎಂದು ಗ್ರಾ.ಪಂ. ಚುನಾವಣೆಯಲ್ಲಿ ತೋರಿಸುತ್ತೇವೆ -ಪ್ರಜ್ವಲ್ ರೇವಣ್ಣ, ಸಂಸದ
ದೇವೇಗೌಡರು ಸ್ಪರ್ಧಿಸಲಿದ್ದಾರೆಯೇ?


ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಪದ್ಧತಿಯ ಔಷಧಿ ಪರಿಣಾಮಕಾರಿ -ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
 ಸರಕಾರಿ ಆಸ್ಪತ್ರೆಗಳ ಅಳಿದುಳಿದ ಆಯುಷ್ಯವನ್ನು ಆಯುಷ್ ಆಹುತಿ ತೆಗೆದುಕೊಳ್ಳುತ್ತಿದೆ.


ಡಿಕೆಶಿ ಗಾಳಿಯಲ್ಲಿ ಗುಂಡು ಹಾರಿಸುವುದರಲ್ಲಿ ನಿಸ್ಸೀಮರು -ಆರ್.ಅಶೋಕ್, ಸಚಿವ
ರೈತರ ಬೆನ್ನಿಗೆ ಗುಂಡು ಹಾರಿಸುವುದಕ್ಕಿಂತ ವಾಸಿ.


ಬಿಜೆಪಿಯಲ್ಲಿ ಬಿ ಫಾರಂ ಪಡೆದು ಶಾಸಕರಾದ ಮೇಲೆ ಮೂಲ-ವಲಸಿಗರು ಎಂಬುದಿಲ್ಲ -ನಳಿನ್ ಕುಮಾರ್ ಕಟೀಲು, ಸಂಸದ
ಅಲ್ಲೇನಿದ್ದರೂ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ಶಾಸಕರು ಅಷ್ಟೇ.


ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ -ಎಸ್.ಆರ್.ಸಂತೋಷ್, ಸಿಎಂ ರಾಜಕೀಯ ಕಾರ್ಯದರ್ಶಿ
ಕೃಷಿ ಸಚಿವರು ನಿಮ್ಮನ್ನು ಉದ್ದೇಶಿಸಿ ರೈತರ ಆತ್ಮಹತ್ಯೆ ಬಗ್ಗೆ ಹೇಳಿಕೆ ನೀಡಿರಬೇಕು.


ಈ.ಡಿ. ಮತ್ತು ಸಿಬಿಐ ಆಧಿಕಾರಿಗಳನ್ನು ಉಗ್ರರನ್ನು ಮಟ್ಟಹಾಕಲು ಗಡಿಗೆ ರವಾನಿಸಬೇಕು -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಸದ್ಯಕ್ಕೆ ಅವರೇ ಉದ್ಯಮಿಗಳ ಪಾಲಿಗೆ ಉಗ್ರರಾಗಿದ್ದಾರೆ.


ನಮ್ಮ ಸರಕಾರದಲ್ಲಿ ಮಧ್ಯವರ್ತಿಗಳು, ದಲ್ಲಾಳಿಗಳಿಗೆ ಅವಕಾಶವೇ ಇಲ್ಲ -ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಸೂಟ್‌ಕೇಸ್ ಏನಿದ್ದರೂ ನೇರವಾಗಿ ಉಪಮುಖ್ಯಮಂತ್ರಿಯ ಕಚೇರಿಗೇ ರವಾನಿಸಿ ಎಂದು ಸಂದೇಶ ನೀಡುತ್ತಿರಬೇಕು.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಲವ್ ಜಿಹಾದ್ ನಿಷೇಧ ಕಾಯ್ದೆಯನ್ನು ತಡೆಯಲು ಸಾಧ್ಯವಿಲ್ಲ -ಶೋಭಾ ಕರಂದ್ಲಾಜೆ, ಸಂಸದೆ
ಪ್ರೀತಿಸುವುದನ್ನು ಕಾಯ್ದೆಯ ಮೂಲಕ ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ನೀವೇ ತಾನೆ ಸಾಬೀತು ಮಾಡಿ ತೋರಿಸಿದ್ದು?


ನಾನು ಕುರುಬ ನಾಯಕನಲ್ಲ, ಹಿಂದುತ್ವದ ಪ್ರತಿಪಾದಕ -ಕೆ.ಎಸ್.ಈಶ್ವರಪ್ಪ, ಸಚಿವ
ಕುರಿಗಳನ್ನು ಹಿಂದುತ್ವದ ಬಲಿಪೀಠಕ್ಕೆ ಒಪ್ಪಿಸುತ್ತಿರುವ ಕುರುಬ ಎಂದರೆ ಅರ್ಥಪೂರ್ಣ.


ರಾಜಕಾರಣದಲ್ಲಿ ಯಾರಿಗೂ ಯಾವ ಶಾಪವೂ ತಗಲುವುದಿಲ್ಲ -ರಮೇಶ್ ಜಾರಕಿಹೊಳಿ, ಸಚಿವ
ತಗಲುತ್ತಿದ್ದರೆ ಜನರ ಶಾಪದಿಂದ ಇಷ್ಟು ಹೊತ್ತಿಗೆ ಬೂದಿಯಾಗುತ್ತಿದ್ದರು.


ದೇವೇಗೌಡರು ಇರುವವರೆಗೂ ನಾನು ಜೆಡಿಎಸ್‌ನಲ್ಲೇ ಇರುತ್ತೇನೆ -ವೈ.ಎಸ್.ವಿ.ದತ್ತಾ, ಮಾಜಿ ಶಾಸಕ
ತುಂಬಾ ಸಮಯ ಜೆಡಿಎಸ್‌ನಲ್ಲಿ ಇರುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೀಗೆ ಹೇಳಿದ್ದಾರೆ.


ಗೋಹತ್ಯೆ ನಿಷೇಧ ಮಾಡಬೇಕೆಂಬುದು ಮಹಾತ್ಮಾ ಗಾಂಧಿಯವರ ಚಿಂತನೆಯಾಗಿದೆ -ಬಸವರಾಜ್ ಬೊಮ್ಮಾಯಿ, ಸಚಿವ
ಆ ಚಿಂತನೆಗಾಗಿಯೇ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿರುವುದಂತೆ.


ತಮಿಳುನಾಡಿನಲ್ಲಿ ಬದಲಾವಣೆ ತರಲು ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ -ರಜನಿಕಾಂತ್, ನಟ
ಬದಲಾವಣೆಯೆಂದರೆ, ಬಿಜೆಪಿಯನ್ನು ತಂದು ತಮಿಳುನಾಡಿನಲ್ಲಿ ಪ್ರತಿಷ್ಠಾಪಿಸುವುದೇ?


ಎಚ್.ವಿಶ್ವನಾಥ್‌ರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ -ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
 ಯಾವ ಪಕ್ಷಕ್ಕೆ ಸೇರಿದರೆ? ಎನ್ನುವುದನ್ನೂ ಹೇಳಿ ಬಿಡಿ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...