ಜನಸಮುದಾಯವನ್ನು ಬಂಡವಾಳಶಾಹಿಗಳಿಗೆ ಉಣಬಡಿಸುತ್ತಿರುವ ಸರಕಾರ: ದೇವನೂರ ಮಹಾದೇವ

Update: 2020-12-06 18:00 GMT

ಮೈಸೂರು,ಡಿ.6: ಭಾರತದಲ್ಲಿ ಸರ್ಕಾರವೇ ಜನಸಮುದಾಯವನ್ನು ಸದೆಬಡಿದು ಬಂಡವಾಳಶಾಹಿಗಳಿಗೆ ಉಣಬಡಿಸುವ ಹಬ್ಬ ನಡೆಸುತ್ತಿದೆ ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ಬೇಸರ ವ್ಯಕ್ತಪಡಿಸಿದರು.

ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ರವಿವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ 64ನೇ ಮಹಾಪರಿನಿಬ್ಬಾಣ ದಿನದ ಅಂಗವಾಗಿ ಸಂವಿಧಾನ ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಆಶಯಗಳನ್ನು ನಾಶ ಮಾಡುತ್ತಿರುವ ಆರೆಸ್ಸೆಸ್ ಬಿಜೆಪಿಯ ದುರಾಡಳಿತದ ವಿರುದ್ಧ ಜನಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ನಂತರ ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯನ್ನು ಹಿನ್ನಡೆ ಮಾಡುತ್ತಿದೆ. ಇದು ಪೈಶಾಚಿಕ ನಡೆ. ದೆಹಲಿಯಲ್ಲಿ ಒಂದು ವಾರದಿಂದಲೂ ರೈತಾಪಿ ಸಮುದಾಯ ಹಗಲು ರಾತ್ರಿ ಎನ್ನದೇ, ಚಳಿ, ಮಳೆ, ಧೂಳು ಎನ್ನದೇ ಕೊರೋನಗೆ ಹೆದರದೇ ಕೃಷಿ ನೀತಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರೂ ಕೇಂದ್ರ ಸರ್ಕಾರ ಮಾತುಕತೆಯಲ್ಲಿ ವಂಚಿಸುತ್ತಿರುವುದನ್ನು ನೋಡಿದರೆ ಇದಕ್ಕೆ ಕಣ್ಣಿಲ್ಲ, ಹೃದಯದಲ್ಲಿ ಕಲ್ಲಿದೆ. ಮನಸ್ಸಿನಲ್ಲಿ ಮನುಷ್ಯತ್ವ ಇಲ್ಲ ಅನ್ನಿಸಿಬಿಡುತ್ತದೆ ಎಂದು ವಾಗ್ದಾಳಿ ನಡೆಸಿದರು.

ಈ ಪೈಶಾಚಿಕ ನಡೆಯಲ್ಲೂ ಒಂದು ರಿದಂ ಇದೆ. ಭಾರತದ ಸಂವಿಧಾನವನ್ನು ಒಪ್ಪದೇ ಇರುವವರು, ತಮ್ಮದೇ ಒಂದು ಸಂವಿಧಾನವನ್ನು ಒಳಗಿಟ್ಟುಕೊಂಡವರು ಇಂದು ಆಳ್ವಿಕೆ ಮಾಡುತ್ತಿದ್ದಾರೆ. ಇವರು ಭಾರತದ ಸಂವಿಧಾನವನ್ನು ಮೊದಲು ಇಲ್ಲವಾಗಿಸಲು ನೋಡುತ್ತಾರೆ. ಆಗದಿದ್ದರೆ ಅದರ ಶೀಲ ಕೆಡಿಸುತ್ತಾರೆ. ಸಿಎಎ, ಎನ್‍ಪಿಆರ್, ಎನ್‍ಆರ್‍ಸಿ ಒಟ್ಟಿಗೆ ಮಾಡಿದ್ದು ಇದೇನೆ ಎಂದು ವಿಶ್ಲೇಷಿಸಿದರು.

ಈ ನೆಲದಲ್ಲಿ ಹುಟ್ಟಿದ ಕಂದಮ್ಮಗಳು ಇಲ್ಲಿನ ಪೌರರು ಎನ್ನುವುದು ಮುನ್ನಡೆ ಅಲ್ಲವೇ? ಹಿನ್ನಡೆ ಮಾಡಿಬಿಟ್ಟರು. ಹಾಗೇನೆ ಮೀಸಲಾತಿ ವಿಚಾರದಲ್ಲೂ ಮಂಡಲ್ ವಿರೋಧಕ್ಕೆ ಹಿನ್ನಲೆ ಗಾಯಕರು ಯಾರು? ವಿದ್ಯಾರ್ಥಿಯೊಬ್ಬನನ್ನು ಬೆಂಕಿಗೆ ಆಹುತಿ ಮಾಡಿಬಿಟ್ಟರು. ಈಗ ಅವರೇ ಅಧಿಕಾರಕ್ಕೆ ಬಂದ ಮೇಲೆ ಮೀಸಲಾತಿ ಇಲ್ಲದಂತೆ ಮಾಡಬೇಕು. ಅದು ಅವರಿಗೆ ಆಗುತ್ತಿಲ್ಲ. ಹೀಗಾಗಿ, ಆರ್ಥಿಕವಾಗಿ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿ ಕೊಟ್ಟರು. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿಯುವಿಕೆ ಪರಿಕಲ್ಪನೆಯನ್ನು ನೆಲಕಚ್ಚಿಸಿ ಬಿಟ್ಟರು. ಸಾಮಾಜಿಕ ನ್ಯಾಯ ಅಂಗಾತ ಬಿತ್ತು ಎಂದು ವಿಷಾದಿಸಿದರು.

ಭಾರತದ ಬುಡ ಕತ್ತರಿಸುತ್ತಿರುವ ಕೆಲವನ್ನು ನಾವು ಮರೆಯಬಾರದು. ಜಿಎಸ್‍ಟಿ ತಂದು ರಾಜ್ಯಗಳ ಸ್ಥಿತಿಯನ್ನು ಬಿಕ್ಷುಕ ಮಾಡಿಬಿಟ್ಟರು. ಇಂದು ರಾಜ್ಯಗಳಿಗೆ ಅಸ್ತಿತ್ವ ಇದೆಯೇ ? ದೇಶದಲ್ಲಿ ಒಕ್ಕೂಟ ಸ್ವರೂಪ ಇದೆಯೇ ? ರಾಜ್ಯಗಳು ಪಕ್ಷಾತೀತವಾಗಿ ಎಚ್ಚರಗೊಳ್ಳಬೇಕಾಗಿದೆ. ಹಾಗೇನೆ ಸ್ವಾಯತ್ತ ಸಂಸ್ಥೆಗಳ ಕತ್ತಿನ ನರ ಕೊಯ್ದು ಅವು ಕುತ್ತಿಗೆ ವಾಲಿಕೊಂಡು ನೇತಾಡುತ್ತಿವೆ. ಭಾರತವು ಭಾರತವಾಗಿ ಉಳಿಯುತ್ತದೆಯೇ ಎಂದು ಹೇಳುವುದು ತುಂಬಾ ಕಷ್ಟ ಎಂದರು.

ದೇಶದಲ್ಲಿ ಸರ್ಕಾರವೇ ಜನಸಮುದಾಯವನ್ನು ಸದೆ ಬಡಿದು ಬಂಡವಾಳಶಾಹಿಗಳಿಗೆ ಉಣಬಡಿಸುವ ಹಬ್ಬ ನಡೆಯುತ್ತಿದೆ. ಇಂಥ ದುರಿತ ಕಾಲದಲ್ಲಿ ಇಲ್ಲಿ ನಾಕಾರು ದಲಿತ ಬಣಗಳು ಒಟ್ಟುಗೂಡಿರುವುದು ಒಂದು ಆಶಾಕಿರಣ. ಹಾಗೆ ಇತ್ತೀಚೆಗೆ ದಲಿತರೂ, ರೈತರೂ, ಕಾರ್ಮಿಕರೂ ಜೊತೆಗೂಡಿಕೊಂಡು ಆಂದೋಲನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.

ಮತ್ತೆ ಮತ್ತೆ ಹೇಳುತ್ತಿದ್ದೇನೆ, ಸಂಘಟನೆಗಳು ಸಮುದಾಯದೊಳಗೆ ಕರಗಿ ಹೋಗಬೇಕು. ಅಲ್ಲಿ ಸಹನೆ, ಪ್ರೀತಿ, ಸಮಾನತೆ ಬಿತ್ತಬೇಕು. ಆಗ ಕರ್ನಾಟಕ ನಿಮ್ಮದು, ಅದು ನನ್ನದೂ ಕೂಡ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಹಿರಿಯ ಮುಖಂಡ ಎನ್.ವೆಂಕಟೇಶ್ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಹಿರಿಯ ರಂಗಕರ್ಮಿ ಜನಾರ್ಧನ್ ಜನ್ನಿ, ದಸಂಸ ಜಿಲ್ಲಾ ಸಂಚಾಲಕರುಗಳಾದ ಆಲಗೂಡು ಶಿವಕುಮಾರ್, ಕಾರ್ಯ ಬಸವಣ್ಣ, ಮಲ್ಲಹಳ್ಳಿ ನಾರಾಯಣ್, ರಾಜಶೇಖರ್ ಕೋಟೆ, ಸೋಮಣ್ಣ ಬನ್ನಹಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೈಸೂರು ತಾಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್ ಸ್ವಾಗತ ಕೋರಿದರು. ಮಲ್ಲಹಳ್ಳಿ ನಾರಾಯಣ್ ನಿರೂಪಿಸಿದರೆ ರಾಮು ಐಲಾಪುರ ವಂದಾನರ್ಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News