×
Ad

ಏಮ್ಸ್ ಪ್ರವೇಶ ಪರೀಕ್ಷೆ: ರಾಜ್ಯದ ವಿದ್ಯಾರ್ಥಿನಿ ದಿವ್ಯಾ ದೇಶಕ್ಕೆ ಪ್ರಥಮ

Update: 2020-12-06 23:51 IST

ವಿಜಯಪುರ, ಡಿ.6: ನವದೆಹಲಿಯ ಏಮ್ಸ್(ಎಐಐಎಂಎಸ್) ಅಖಿಲ ಭಾರತ ಮಟ್ಟದಲ್ಲಿ ನಡೆದ ಪ್ರವೇಶ ಪರೀಕ್ಷೆಯ ಫಲಿತಾಂಶ ರವಿವಾರ ಪ್ರಕಟವಾಗಿದ್ದು, ಡಿಎಂ- ಜನರಲ್ ಕ್ರಿಟಿಕಲ್ ಕೇರ್ ಮೆಡಿಷಿನ್ ವಿಭಾಗ(ಡಿಎಂ- ಜನರಲ್ ಕ್ರಿಟಿಕಲ್ ಕೇರ್ ಮೆಡಿಷಿನ್)ದಲ್ಲಿ ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದಿವ್ಯಾ ಅರವಿಂದ ಹಿರೊಳ್ಳಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಏಮ್ಸ್ ನವೆಂಬರ್ 20ರಂದು ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ದಿವ್ಯಾ ಹಿರೊಳ್ಳಿ ಶೇ 67.08 ಅಂಕ ಪಡೆದುಕೊಂಡು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್ ನಲ್ಲಿ ಹಿರಿಯ ವಕೀಲರಾಗಿರುವ ಅರವಿಂದ ಹಿರೊಳ್ಳಿ ಅವರ ಪುತ್ರಿಯಾಗಿರುವ ದಿವ್ಯಾ ಅವರು ಬಿ.ಎಲ್‌.ಡಿ.ಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ (2012), ಹುಬ್ಬಳ್ಳಿ ಕಿಮ್ಸ್ ನಲ್ಲಿ ಎಂಡಿ(2016), ಪಾಂಡಿಚೇರಿಯ ಜಿಪ್‌ಮೇರ್ ನಲ್ಲಿ ಫೆಲೋಶಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಫೆಲೊಶಿಪ್ ಇನ್ ನಿರೊ ಕ್ರಿಟಿಕಲ್ ಕೇರ್ ಪಡೆದುಕೊಂಡಿದ್ದಾರೆ.

''ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಬರುವ ನಿರೀಕ್ಷೆ ಇತ್ತು. ಇದು ನನಗೆ ತುಂಬಾ ಖುಷಿ ನೀಡಿದೆ. ಈಗ ಮೂರು ವರ್ಷಗಳ ಈ ಕೋರ್ಸ್ ಸಂಪೂರ್ಣ ಉಚಿತವಾಗಿದೆ. ಭವಿಷ್ಯದಲ್ಲಿ ಕ್ರಿಟಿಕಲ್ ಕೇರ್‌ನಲ್ಲಿ ಹೆಚ್ಚಿನ ಸಾಧನೆ ಮಾಡುವ ಗುರಿ ಇದೆ'' ಎಂದು ದಿವ್ಯಾ ಅರವಿಂದ ಹಿರೊಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News