ಅವಿಶ್ವಾಸ ನಿರ್ಣಯದ ವೇಳೆ ಕಾಂಗ್ರೆಸನ್ನು ಜೆಡಿಎಸ್ ಬೆಂಬಲಿಸಲಿದೆಯೇ ?: ಕುಮಾರಸ್ವಾಮಿ ಹೇಳಿದ್ದು ಹೀಗೆ...

Update: 2020-12-07 11:54 GMT
File Photo

ಬೆಂಗಳೂರು, ಡಿ. 7: 'ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್ ಜಾತ್ಯತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಇದನ್ನು ಈ ವೇಳೆಯಲ್ಲಿ ತಿಳಿಯ ಬಯಸುತ್ತೇನೆ. ಕಾಂಗ್ರೆಸ್ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತತೆಯನ್ನು ಅನುಮಾನಿಸಲಾಗುತ್ತಿದೆ' ಎಂದು ಲೇವಡಿ ಮಾಡಿದ್ದಾರೆ.

'ಸಭಾಪತಿ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವಂತೆ ಕಾಂಗ್ರೆಸಿನ ಯಾವ ನಾಯಕನೂ ಸೌಜನ್ಯಕ್ಕೂ ಜೆಡಿಎಸ್ ಬಳಿ ಚರ್ಚಿಸಿಲ್ಲ. ಹೀಗಿದ್ದೂ, ಜೆಡಿಎಸ್ ಜಾತ್ಯತೀತತೆಯ ಪರೀಕ್ಷೆ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ದುರಹಂಕಾರದ್ದು. ಬೆಂಬಲ ಕೇಳದಿದ್ದರೂ ಬೆಂಬಲಿಸಲು ನಾವೇನು ಗುಲಾಮರಲ್ಲ. ಕಾಂಗ್ರೆಸ್ಸಿನ ದೌಲತ್ತೇ ಅದರ ದುಸ್ಥಿತಿಗೆ ಕಾರಣ' ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

'ನಮ್ಮ ಧರ್ಮ, ದೇವರಲ್ಲಿ ಆಳ ನಂಬಿಕೆ ಹೊಂದಿಯೂ, ಎಲ್ಲರ ನಂಬಿಕೆಗಳನ್ನು ಗೌರವಿಸುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದು ದೇವೇಗೌಡರ ಜಾತ್ಯತೀತತೆ ಎಂಬುದನ್ನು ಸಂದರ್ಭ ಸಿಕ್ಕಾಗ ಹೇಳಿದ್ದೇನೆ. ಆದರೆ ಕಾಂಗ್ರೆಸ್, ಸಿದ್ದರಾಮಯ್ಯರ ವ್ಯಾಖ್ಯಾನ ಇದಕ್ಕೆ ವಿರುದ್ಧವಾದ್ದು. ಜಾತಿಗಳನ್ನು ಒಡೆಯುವುದು, ಅನಗತ್ಯ ಓಲೈಕೆಯೇ ಅವರ ಜಾತ್ಯತೀತತೆ' ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

'ಒಳ್ಳೆ ಇಮೇಜ್ ಅನ್ನು ಚುನಾವಣೆ ಮತ್ತು ಸ್ಥಾನ ಗಳಿಕೆ ಮೇಲೆ ಲೆಕ್ಕ ಹಾಕಿದ್ದಾರೆ ಸಿದ್ದರಾಮಯ್ಯನವರು. ಹಾಗಾದರೆ ದೇಶದ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್‍ನ ಇಮೇಜ್ ಕತೆ ಏನು? 2018ರ ಚುನಾವಣೆಯಲ್ಲಿ 120 ರಿಂದ 80ಕ್ಕೆ ಕುಸಿದ, ಸ್ವತಃ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರಿಗೆ ಇಮೇಜ್ ಇತ್ತೇ? ಇಮೇಜ್ ಇರುವುದು ನಮ್ಮ ಒಳ್ಳೆತನದಲ್ಲಿ' ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

'ಜೆಡಿಎಸ್ ಬಿಜೆಪಿಯ 'ಬಿ' ಟೀಮ್ ಎಂಬ ಕಾಂಗ್ರೆಸ್ಸಿಗರ ಸವಕಲು ಆರೋಪಕ್ಕೆ ಈ ಹಿಂದೆಯೇ ಉತ್ತರ ನೀಡಿದ್ದೇನೆ. ಈಗಲೂ ಹೇಳುತ್ತೇನೆ. ಕಾಂಗ್ರೆಸ್ಸೇ ಜೆಡಿಎಸ್‍ನ ಬಿ ಟೀಂ. ಕರ್ನಾಟಕ ಪ್ರದೇಶ ಕಾಂಗ್ರೆಸ್‍ನ ಪಕ್ಕದಲ್ಲಿ ಆವರಣ(ಬ್ರಾಕೆಟ್) ಹಾಕಿ ಅದರಲ್ಲಿ ಜೆಡಿಎಸ್ ಎಂದು ಬರೆದಾಗಷ್ಟೇ ಅದರ ಹೆಸರು ಪೂರ್ಣವಾಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿ ಜೆಡಿಎಸ್ ಇದೆ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

'ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಅಂದರೆ ಹೈಕಮಾಂಡ್‍ನ ನಿರ್ಣಯ ತಮಗೆ ಇಷ್ಟವಿರಲಿಲ್ಲ ಎಂಬುವುದು ಸಿದ್ದರಾಮಯ್ಯ ಅವರ ಮಾತಿನಲ್ಲಿ ಧ್ವನಿಸುತ್ತಿರುವ ಅರ್ಥ. ಹೀಗಾಗಿಯೇ ಸಿದ್ದರಾಮಯ್ಯ ಸರಕಾರ ಕೆಡವಿದರು. ಅದರ ಅಪವಾದ ಬೇರೆಯವರಿಗೆ ಬಳಿದರು' ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

'ಜಾತ್ಯತೀತ ನಿಲುವಿನ ಬಗ್ಗೆ, ದೇವೇಗೌಡರ ಬದ್ದತೆ ಬಗ್ಗೆ ನಾವು ನಿಮ್ಮಿಂದ ಉಪದೇಶ ಕೇಳಬೇಕಿಲ್ಲ. ದೇವೇಗೌಡರ ಬದ್ಧತೆಯನ್ನು ಬಳಸಿಕೊಂಡು ಬ್ಲ್ಯಾಕ್‍ಮೇಲ್ ಮಾಡಿದ ಕಾಂಗ್ರೆಸ್ ಇವತ್ತು ಜೆಡಿಎಸ್‍ನ ನಿಲುವನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

'ಇನ್ನು ಫೈವ್‍ಸ್ಟಾರ್ ಸಂಸ್ಕೃತಿ ಬಗ್ಗೆ ರಾಗ ಎಳೆದಿದ್ದೀರಿ? ಫೈವ್‍ಸ್ಟಾರ್ ಹಾಗೂ ಗುಡಿಸಲಿನಿಂದಲೂ ಅಧಿಕಾರ ನಡೆಸಿದ್ದೇನೆ. ಜನತೆಗೆ ನನ್ನಷ್ಟು ಸುಲಭವಾಗಿ ದಕ್ಕುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುವುದನ್ನು ನೆನಪಿಸಲು ಬಯಸುತ್ತೇನೆ' ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News