×
Ad

ವಿಧಾನಸಭೆ ಅಧಿವೇಶನ: ಸಚಿವ ಆರ್.ಅಶೋಕ್ ವಿರುದ್ಧ ಸ್ಪೀಕರ್ ಕಾಗೇರಿ ಗರಂ

Update: 2020-12-07 17:32 IST

ಬೆಂಗಳೂರು, ಡಿ. 7: 'ನಿಮ್ಮ ಅಧಿಕಾರಿಗಳ ನಿರ್ಲಕ್ಷ್ಯತೆ, ಕಂದಾಯ ಇಲಾಖೆ ಸಾಫ್ಟ್ ವೇರ್ ದೋಷದಿಂದ ಪಹಣಿಯ ಬೆಳೆ ಕಾಲಂನಲ್ಲಿ ಖುಷ್ಕಿ ಎಂದು ಬರುತ್ತಿದ್ದು, ಇದರಿಂದ ರೈತರಿಗೆ ಸಹಕಾರ ಸಂಘಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಅವರಿಗೆ ಸೂಚಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ರಾಜೇಗೌಡ ಕೇಳಿದ ಪ್ರಶ್ನೆಗೆ ಸಚಿವ ಅಶೋಕ್ ನೀಡಿದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಕಾಗೇರಿ, ಕಂದಾಯ ಇಲಾಖೆ ಅಧಿಕಾರಿಗಳ ಉತ್ತರವನ್ನು ಒಪ್ಪಿಸಬೇಡಿ. ಈ ಬಗ್ಗೆ ನೀವು ಖುದ್ದು ಪರಿಶೀಲಿಸಿ ಸಮಸ್ಯೆ ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರ್ಯಾದೆ ಕಳೆಯುತ್ತಾರೆ: ಕಂದಾಯ ಇಲಾಖೆ ಸಾಫ್ಟ್ ವೇರ್ ದೋಷದಿಂದ ಪಹಣಿಯ ಬೆಳೆ ಕಾಲಂನಲ್ಲಿ ಕುಷ್ಕಿ ಎಂದು ಅಧಿಕಾರಿಗಳು ನಮೂನೆ ಮಾಡುತ್ತಿದ್ದಾರೆ. ಇದರ ಪರಿಣಾಮ ಕಾಫಿ, ಅಡಿಕೆ, ಏಲಕ್ಕಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಸಾಲ ಸಿಗುತ್ತಿಲ್ಲ. ಹೀಗಾಗಿ ಮಲೆನಾಡು ಮತ್ತು ಕರಾವಳಿ ಪ್ರದೇಶದ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಫ್ಟ್ ವೇರ್ ನಿರ್ವಹಣೆ ಖಾಸಗಿ ಏಜೆನ್ಸಿಗಳಿಗೆ ಕೊಟ್ಟಿರುತ್ತೀರಿ. ಅದನ್ನು ಕಾಲಮಿತಿಯೊಳಗೆ ಸರಿಪಡಿಸದಿದ್ದರೆ ನಿಮ್ಮ ಅಧಿಕಾರಿಗಳೇ ಸರಕಾರದ ಮರ್ಯಾದೆ ಕಳೆಯುತ್ತಾರೆ ಎಂದು ಕಿಡಿಕಾರಿದರು.

ಇದಕ್ಕೆ ದನಿಗೂಡಿಸಿದ ಆಡಳಿತ ಮತ್ತು ವಿಪಕ್ಷಗಳ ಸದಸ್ಯರಾದ ಅರಗ ಜ್ಞಾನೇಂದ್ರ, ಅಶೋಕ್‍ ನಾಯಕ್, ಎಚ್.ಕೆ.ಕುಮಾರಸ್ವಾಮಿ, ಶಿವಲಿಂಗೇಗೌಡ ಸೇರಿದಂತೆ ಇನ್ನಿತರ ಸದಸ್ಯರು, ಕೂಡಲೇ ಕಂದಾಯ ಇಲಾಖೆ ಸಾಫ್ಟ್ ವೇರ್ ದೋಷವನ್ನು ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಕೋರಿದರು.

ಈ ಬಗ್ಗೆ ಶೀಘ್ರವೇ ಖುದ್ದು ಪರಿಶೀಲಿಸಿ ಸಾಫ್ಟ್ ವೇರ್ ದೋಷ ಸರಿಪಡಿಸಲಾಗುವುದು. ಅಲ್ಲದೆ, ಈ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದ ಅವರು, ಪಹಣಿಗೆ ಸಂಬಂಧಿಸಿದ ಲೋಪಗಳನ್ನು ತ್ವರಿತಗತಿ ಸರಿಪಡಿಸಲು ಕ್ರಮ ವಹಿಸುತ್ತೇವೆ ಎಂದು ಸದನಕ್ಕೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News