ಚುನಾವಣಾ ಪ್ರಚಾರಕ್ಕೆ ಬರುವ ಕನ್ನಡ ನಟರು ರೈತರನ್ನು ಬೆಂಬಲಿಸಿ ಒಂದೂ ಮಾತನ್ನೂ ಆಡಿಲ್ಲ: ನಟ ಚೇತನ್

Update: 2020-12-07 12:39 GMT

ಬೆಂಗಳೂರು, ಡಿ.12: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ದೇಶದ ರಾಜಧಾನಿಯಲ್ಲಿ ರೈತರು ಭಾರೀ ಹೋರಾಟ ನಡೆಸುತ್ತಿದ್ದು, ಡಿಸೆಂಬರ್​ 8 ರಂದು ಭಾರತ್ ಬಂದ್​ಗೂ ಕರೆ ನೀಡಿದ್ದಾರೆ. 

ಇದಕ್ಕೆ ಸಂಬಂಧಿಸಿದಂತೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅವರು ಕನ್ನಡ ಚಲನಚಿತ್ರ ನಟರನ್ನು ಪ್ರಶ್ನಿಸಿದ್ದು, 'ಚುನಾವಣಾ ಪ್ರಚಾರಕ್ಕೆ ವೇಗವಾಗಿ ಸ್ಪಂದಿಸುವ ಕನ್ನಡ ಚಲನಚಿತ್ರ ನಟರು ರೈತರ ಪರವಾಗಿ ಒಂದೂ ಮಾತನ್ನು ಆಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕೇಂದ್ರ ಕೃಷಿ ಮಸೂದೆಯನ್ನು ಖಂಡಿಸಿ ರೈತರು ಕಳೆದ ಹಲವು ತಿಂಗಳುಗಳಿಂದ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಚುನಾವಣಾ ಪ್ರಚಾರದ ಬ್ಯಾಂಡ್‌ವ್ಯಾಗನ್‌ಗಳ ಮೇಲೆ ವೇಗವಾಗಿ ನೆಗೆಯುವ ಕನ್ನಡ ಚಲನಚಿತ್ರ ನಟರು ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ. ನಾವು ನಟರು ಜನರಿಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸುತ್ತೇವೆಯೇ? ಅಥವಾ ನಮ್ಮ ಶ್ರೀಮಂತ ಗಣ್ಯ ಸ್ನೇಹಿತರನ್ನು ಸಂಸತಪಡಿಸುವುದಕ್ಕಷ್ಟೇ ಆಸಕ್ತಿ ತೋರಿಸುತ್ತೇವೆಯೇ?" ಎಂದು ಪ್ರಶ್ನಿಸಿದ್ದಾರೆ.

ದಿಲ್ಲಿಯಲ್ಲಿ ಹೋರಾಟದಲ್ಲಿ ನಿರತರಾಗಿರುವ ರೈತರು ಕಳೆದ 12 ದಿನಗಳಿಂದ ನ್ಯಾಯಕ್ಕಾಗಿ ಕೇಂದ್ರ ಸರಕಾರಕ್ಕೆ ಬೇಡಿಕೆಯಿಡುತ್ತಿದ್ದಾರೆ. ಅಲ್ಲದೆ, ಡಿ.8 ರಂದು ಭಾರತ್ ಬಂದ್​ಗೂ ಕರೆ ನೀಡಿದ್ದಾರೆ. ಕಾಂಗ್ರೆಸ್​, ಎಡಪಕ್ಷಗಳು ಹಾಗೂ ಎಲ್ಲಾ ಕಾರ್ಮಿಕ ಸಂಘಟನೆಗಳು ಈ ಬಂದ್​ಗೆ ಬೆಂಬಲ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News