×
Ad

ಅಧಿವೇಶನದಲ್ಲಿ ಚರ್ಚೆಗೆ ಗ್ರಾಸವಾದ ಸಚಿವ ಸುರೇಶ್‍ ಕುಮಾರ್ ಟ್ವೀಟ್

Update: 2020-12-07 19:42 IST

ಬೆಂಗಳೂರು, ಡಿ.7: ಕಳೆದ ಅಧಿವೇಶನದಲ್ಲಿ ವಿಧಾನಪರಿಷತ್ ಕಲಾಪ ಮುಂದೂಡಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಸಭಾಪತಿ ಪ್ರತಾಪ್‍ ಚಂದ್ರ ಶೆಟ್ಟಿ ಸದನದಲ್ಲಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು.

ಸೋಮವಾರ ವಿಧಾನಪರಿಷತ್‍ನಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ನಂತರ ವಿಷಯ ಪ್ರಸ್ತಾಪಿಸಿದ ಸಭಾಪತಿ, ಅಧಿವೇಶನ ಮುಂದೂಡಿಕೆಗೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಒಮ್ಮತದಿಂದ ತೆಗೆದುಕೊಂಡ ತೀರ್ಮಾನವನ್ನು ಸಚಿವರು ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಬಗ್ಗೆ ಇಲ್ಲಿ ಚರ್ಚಿಸುವ ಅಗತ್ಯವೂ ಇಲ್ಲವೆಂದು ತಿಳಿಸಿದರು.

ಈ ವೇಳೆ ಬಿಜೆಪಿ ಸದಸ್ಯ ರವಿಕುಮಾರ್ ಎದ್ದುನಿಂತು, ಸಚಿವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಟ್ವೀಟನ್ನು ಸದನದಲ್ಲಿ ಪ್ರಸ್ತಾಪಿಸುವ ಅಗತ್ಯವಿತ್ತೆ. ಇದಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿಯಮವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸಭಾಪತಿಗಳಿಗೆ ಎಲ್ಲ ವಿಷಯಗಳನ್ನು ಪ್ರಸ್ತಾಪಿಸುವ ಅಧಿಕಾರ ಇರುತ್ತದೆ ಎಂದು ತಿಳಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರವಿಕುಮಾರ್, ಸಾರ್ವಜನಿಕವಾಗಿ ನಡೆಯುವ ಎಲ್ಲ ವಿಷಯಗಳನ್ನು ಸಭಾಪತಿಗಳು ಇಲ್ಲಿ ಪ್ರಸ್ತಾಪಿಸುತ್ತಾ ಹೋದರೆ ಸದನದ ಘನತೆಗೆ ಕುಂದುಂಟಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಸಭಾಪತಿಗಳು, ಈ ಮಾತನ್ನು ನನಗೆ ಹೇಳುತ್ತಿದ್ದೀರಾ, ಇಲ್ಲವೆ ಸಚಿವರಿಗೆ ಹೇಳುತ್ತಿದ್ದೀರಾ ಎಂದು ಕಾಲೆಳೆದರು.

ಅಂತಿಮವಾಗಿ ಆಡಳಿತ ಪಕ್ಷದ ನಾಯಕ ಶ್ರೀನಿವಾಸ ಪೂಜಾರಿ, ಕೆಳಮನೆಯಲ್ಲಿ ಅನುಮೋದನೆಗೊಂಡ ಮಸೂದೆಗಳನ್ನು ಮೇಲ್ಮನೆಯಲ್ಲಿ ತಿರಸ್ಕರಿಸುವುದು ಒಳ್ಳೆಯ ಲಕ್ಷಣವಲ್ಲ. ಇದರಿಂದ ಸರಕಾರ ನಡೆಸುವುದಾದರು ಹೇಗೆ. ಈ ಹಿನ್ನೆಲೆಯಲ್ಲಿ ಸಚಿವ ಸುರೇಶ್‍ ಕುಮಾರ್ ವಿಷಯ ಪ್ರಸ್ತಾಪಿಸಿದ್ದಾರೆಂದರು. ನಂತರ ಸಭಾಪತಿಗಳು ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News