ಡಿ.14, 15ರಂದು ‘ಒಂದು ರಾಷ್ಟ್ರ ಒಂದು ಚುನಾವಣೆ' ಚರ್ಚೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು, ಡಿ. 7: ವಿಧಾನ ಮಂಡಲ ಅಧಿವೇಶನದಲ್ಲಿ ಡಿ.14 ಮತ್ತು 15ರಂದು 'ಒಂದು ರಾಷ್ಟ್ರ ಒಂದು ಚುನಾವಣೆ' ವಿಚಾರದ ಕುರಿತು ಚರ್ಚೆ ನಡೆಸಲಾಗುವುದು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಪ್ರಕಟಿಸಿದ್ದಾರೆ.
ಸೋಮವಾರ ವಿಧಾನಸಭೆ ಕಲಾಪದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಮಂಡನೆ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಒಂದು ರಾಷ್ಟ್ರ, ಒಂದು ಚುನಾವಣೆ ವಿಷಯವನ್ನು ಪ್ರಸ್ತಾಪಿಸಿದ್ದು, ಈ ಬಗ್ಗೆ ಚರ್ಚೆ, ಸಂವಾದದ ಅಗತ್ಯವಿದೆ ಎಂದರು.
ಮುನ್ನಚ್ಚರಿಕೆ ವಹಿಸಿ: ಕೊರೋನ ಸೋಂಕಿನ ಎರಡನೇ ಅಲೆ ಪ್ರಾರಂಭವಾಗುತ್ತಿದೆ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದು, ಸದನದ ಎಲ್ಲ ಸದಸ್ಯರು ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದರ ಜತೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಸಂದರ್ಭದಲ್ಲಿಯೂ ನಿರ್ಲಕ್ಷ್ಯ ಸರಿಯಲ್ಲ ಎಂದು ಅವರು ಸಲಹೆ ನೀಡಿದರು.
ಅನಾರೋಗ್ಯ ಅಥವಾ ಕೊರೋನ ವೈರಸ್ ಸೋಂಕಿನ ಲಕ್ಷಣ ಇರುವವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದ ಅವರು, ಕೊರೋನ ಸೋಂಕಿನ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪವಿದೆ. ಹೀಗಾಗಿ ಎಲ್ಲರೂ ಸ್ವಯಂ ಶಿಸ್ತು ಪಾಲಿಸಬೇಕು. ಇಲ್ಲವಾದರೆ ಕೋವಿಡ್-19 ಸೋಂಕಿನ ನಿರ್ಲಕ್ಷ್ಯದಿಂದ ಆಗುವ ಅನಾಹುತದ ಬಗ್ಗೆ ನಮಗೆಲ್ಲರಿಗೂ ಅರಿವಿದೆ ಎಂದರು.
ಲಾಂಜ್‍ಗೆ ಹೋಗಿ: ಮಾತನಾಡಬೇಕಿದ್ದರೆ ಕಲಾಪದ ಹೊರಗೆ ಹೋಗಿ ಅಲ್ಲಿ ಲಾಂಜ್ ಇದೆ. ಸಚಿವರೊಂದಿಗೆ ಸಮಾಲೋಚನೆ ನಡೆಸಬೇಕಿದ್ದರೆ ಅವರ ಕೊಠಡಿಗಳಿಗೆ ಹೋಗಿ. ಆದರೆ, ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಕಲಾಪದಲ್ಲಿ ಗುಂಪುಗೂಡಿ, ಪರಸ್ಪರ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಾಗೇರಿ ಸೂಚಿಸಿದರು.
ನಾಳೆ ಸಭೆ: ಸುಗಮ ಕಲಾಪ ನಡೆಸಲು ನಾಳೆ(ಡಿ.8) ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಲಾಪ ಸಲಹಾ ಸಮಿತಿ ಸಭೆಯನ್ನು ನಡೆಸಲಾಗುವುದು ಎಂದ ಅವರು, ಅಲ್ಲಿನ ಸಲಹೆ-ಸೂಚನೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.