×
Ad

ಭಾರತ್ ಬಂದ್‍ ಬೆಂಬಲಿಸಿ ಅನ್ನದಾತರ ಋಣ ಸಂದಾಯ ಮಾಡಬೇಕಾಗಿದೆ: ಸಿದ್ದರಾಮಯ್ಯ

Update: 2020-12-07 21:08 IST

ಬೆಂಗಳೂರು, ಡಿ.7: ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆಕೊಟ್ಟಿರುವ ಡಿ.8ರ ಭಾರತ ಬಂದ್‍ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಬಂದ್‍ನಲ್ಲಿ ಭಾಗವಹಿಸುವುದಲ್ಲದೆ ಪ್ರತಿಯೊಬ್ಬ ನಾಗರಿಕರೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋರಿದ್ದಾರೆ.

ದೇಶದ ರಾಜಧಾನಿಯಲ್ಲಿ ಲಕ್ಷಾಂತರ ರೈತರು ಕೊರೆಯುವ ಚಳಿ, ಪೊಲೀಸರ ದೌರ್ಜನ್ಯ ಮತ್ತು ಬಿಜೆಪಿ ಕಿಡಿಗೇಡಿಗಳ ಅಪಪ್ರಚಾರಕ್ಕೆ ಎದೆಗೊಟ್ಟು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ನಮಗಾಗಿ ಹೋರಾಟ ನಡೆಸುತ್ತಿರುವ ಅನ್ನದಾತರ ಬೆಂಬಲಕ್ಕೆ ನಿಲ್ಲುವುದು ಅನ್ನ ತಿನ್ನುವ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊರೋನ ವೈರಸ್ ದಾಳಿಯಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿ ನರಳುತ್ತಿರುವ ನಮ್ಮ ರೈತ ಬಂಧುಗಳು ‘ನಮ್ಮನ್ನು ರಕ್ಷಿಸಿ, ಉಳಿಸಿ’ ಎಂದು ಗೋಗರೆಯುತ್ತಿರುವಾಗ, ಕೇಂದ್ರ ಸರಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಅವಸರದಲ್ಲಿ ಜಾರಿಗೊಳಿಸಿ ಅವರ ಗಾಯದ ಮೇಲೆ ಬರೆ ಎಳೆದು ನಿಧಾನವಾಗಿ ಸಾಯಿಸಲು ಹೊರಟಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಖಾಸಗಿ ಕಂಪೆನಿಗಳ ತಾಳಕ್ಕೆ ಕೇಂದ್ರ ಸರಕಾರ ಕುಣಿಯತೊಡಗಿದೆ. ಈ ಸಂಚಿನ ಭಾಗವಾಗಿಯೇ ಎಪಿಎಂಸಿ ಹೊಂದಿರುವ ನಿಯಂತ್ರಣವನ್ನು ಕಿತ್ತು ಹಾಕಿ ಖಾಸಗಿಯವರಿಗೆ ಅನಿಯಂತ್ರಿತವಾದ ಮುಕ್ತ ಹಸ್ತ ನೀಡುವ ದುರುದ್ದೇಶದಿಂದ ಈ ಕಾಯ್ದೆ ತರಲಾಗಿದೆ. ಈ ಬಗ್ಗೆ ನಮ್ಮ ರೈತರು ಜಾಗೃತರಾಗಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ರೈತ ಸಂಘಟನೆಗಳ ಜೊತೆ ಕೇಂದ್ರ ಸರಕಾರ ಹಲವು ಸುತ್ತಿನ ಮಾತುಕತೆ ನಡೆಸಿದರೂ ಕನಿಷ್ಠ ಬೆಂಬಲ ಬೆಲೆಯ ಒಂದು ಅಂಶವನ್ನು ಕಾನೂನಿನಲ್ಲಿ ಅಳವಡಿಸಬೇಕೆಂಬ ಸಣ್ಣ ಬೇಡಿಕೆಯನ್ನು ಒಪ್ಪದಿರುವ ಕೇಂದ್ರ ಸರಕಾರದ ದುರುದ್ದೇಶ ಸ್ಪಷ್ಟವಾಗಿದೆ. ಇದು ಕಾರ್ಪೋರೇಟ್ ಧಣಿಗಳ ಗುಲಾಮಿ ಸರಕಾರ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಪ್ರಕಾರ ಕೃಷಿ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರೂ ರಾಜ್ಯ ಸರಕಾರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡು ಈ ಕರಾಳ ಕಾನೂನುಗಳನ್ನು ತಂದಿರುವ ಕೇಂದ್ರ ಸರಕಾರದ ನಡೆ ಪ್ರಜಾಪ್ರಭುತ್ವ ವಿರೋಧಿಯಾದುದು ಎಂದು ಅವರು ತಿಳಿಸಿದ್ದಾರೆ.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣದ ತಿದ್ದುಪಡಿ, ಪ್ರಮುಖ ಬೆಳೆಗಳನ್ನು ಅಗತ್ಯವಸ್ತುಗಳ ಕಾಯ್ದೆ ಹೊರಗಿಡುವ ತಿದ್ದುಪಡಿ, ಬೀಜ-ಗೊಬ್ಬರಗಳ ಮೇಲೆ ಜಿಎಸ್‍ಟಿ. ಹೀಗೆ ಒಂದಾದರ ಮೇಲೊಂದರಂತೆ ರೈತರ ಮೇಲೆ ಪ್ರಹಾರ ಮಾಡುತ್ತಾ ಬಂದಿರುವ ಬಿಜೆಪಿಯಿಂದ ದೇಶಕ್ಕೆ ಉಳಿಗಾಲ ಇಲ್ಲ. ರಾಜ್ಯದ ಬಿಜೆಪಿ ಸರಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದಗೆ ತಂದಿರುವ ತಿದ್ದುಪಡಿ ಕೂಡ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳ ಹಿತಾಸಕ್ತಿ ರಕ್ಷಣೆಗಾಗಿ ರೈತರನ್ನು ಬಲಿಗೊಡುವ ಅಜೆಂಡಾದ ಭಾಗವಾಗಿದೆ ಎಂದು ಅವರು ದೂರಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರದ ರೈತವಿರೋಧಿ ನೀತಿ-ನಿರ್ಧಾರಗಳನ್ನು ಗುಲಾಮರಂತೆ ತಲೆಬಗ್ಗಿಸಿ ಒಪ್ಪಿಕೊಂಡು ಜಾರಿಗೊಳಿಸುತ್ತಿರುವ ರಾಜ್ಯದ ಬಿಜೆಪಿ ಸರಕಾರ ರಾಜ್ಯದ ರೈತರಿಗೆ ದ್ರೋಹಬಗೆಯುತ್ತಿದೆ. ಹಿಂದೆ ಗುಂಡು ಹೊಡೆದು ರೈತರನ್ನು ಸಾಯಿಸಿದ ಯಡಿಯೂರಪ್ಪ ಈಗ ಕರಾಳ ಕಾನೂನುಗಳ ಮೂಲಕ ರೈತರನ್ನು ಸಾಯಿಸಲು ಹೊರಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ರೈತರು ಪ್ರಭತ್ವದ ದೌರ್ಜನ್ಯವನ್ನು ಎದುರಿಸಿ, ಕಷ್ಟ-ನಷ್ಟಗಳನ್ನುಂಡು ನಮಗಾಗಿ ಹೋರಾಡುತ್ತಿದ್ದಾರೆ. ನಾಳಿನ ಭಾರತ ಬಂದ್‍ಗೆ ಎಲ್ಲರೂ ಬೆಂಬಲ ನೀಡುವ ಮೂಲಕ ಅನ್ನದಾತರ ಋಣ ಸಂದಾಯ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News