ಪಾಸ್ವಾನ್, ಜಸ್ವಂತ್ ಸಿಂಗ್, ಡಾ.ಆಮೂರ, ರವಿ ಬೆಳಗೆರೆ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

Update: 2020-12-07 16:29 GMT

ಬೆಂಗಳೂರು, ಡಿ. 7: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಮಾಜಿ ಸಚಿವ ಡಾ.ವೈ.ನಾಗಪ್ಪ, ಖ್ಯಾತ ವಿಮರ್ಶಕ ಡಾ.ಜಿ.ಎಸ್.ಆಮೂರ, ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್, ಪತ್ರಕರ್ತ ರವಿ ಬೆಳಗೆರೆ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡಲದಲ್ಲಿ ಉಭಯ ಸದನಗಳಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಸೋಮವಾರ ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ ಅಗಲಿದ ಗಣ್ಯರನ್ನು ಸದನ ಕಲಾಪದ ಗಮನಕ್ಕೆ ತಂದರು.

ಈ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕೇಂದ್ರದ ಸಚಿವರಾಗಿದ್ದ ರಾಮ್‍ವಿಲಾಸ್ ಪಾಸ್ವಾನ್, ದೀನ ದಲಿತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಅಪರೂಪದ ವ್ಯಕ್ತಿ. ಡಾ.ವೈ.ನಾಗಪ್ಪ, ಬಸವಂತ್ ಐರೋಜಿ ಪಾಟೀಲ್, ಕೆ.ಮಲ್ಲಪ್ಪ, ರತನ್‍ಕುಮಾರ್ ಕಟ್ಟೆಮಾರ್, ಜಸ್ವಂತ್ ಸಿಂಗ್, ಡಾ.ಆಮೂರ, ಡಾ.ಸೋಂದೆ, ರವಿ ಬೆಳಗೆರೆ ಅವರನ್ನು ನೆನಪು ಮಾಡಿಕೊಂಡು ಅವರ ಗುಣಗಾನ ಮಾಡಿದರು.

ಪಡಿತರ ವ್ಯವಸ್ಥೆ ಸುಧಾರಣೆ: ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಮಂಡಲ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಈ ವರದಿಯನ್ನು ಅನುಷ್ಠಾನ ಮಾಡಬಾರದೆಂದು ಕೆಲವರು ವಿರೋಧಿಸಿದಾಗ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್, ಈಗಿನ ಬಿಹಾರದ ಸಿಎಂ ನಿತೀಶ್ ಕುಮಾರ್, ಶರದ್ ಯಾದವ್ ಸೇರಿದಂತೆ ಅನೇಕರ ಜತೆ ಹೋರಾಟ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.

'ಒಂದು ರಾಷ್ಟ್ರ, ಒಂದು ಪಡಿತರ ವ್ಯವಸ್ಥೆ'ಯನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದರು. ದಲಿತರು ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದ ಅಪರೂಪದ ರಾಜಕಾರಣಿ ರಾಮ್ ವಿಲಾಸ್ ಪಾಸ್ವಾನ್ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜೆ.ಸಿ.ಮಾಧುಸ್ವಾಮಿ, ಜೆಡಿಎಸ್‍ನ ಎಚ್.ಕೆ.ಕುಮಾರಸ್ವಾಮಿ, ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್, ಬಿಎಸ್ಪಿ ಸದಸ್ಯ ಎನ್. ಮಹೇಶ್ ಸೇರಿದಂತೆ ಇನ್ನಿತರರು ಅಗಲಿದ ಗಣ್ಯರನ್ನು ಸ್ಮರಿಸಿದರು. ಆ ಬಳಿಕ ಮೃತರ ಗೌರವಾರ್ಥವಾಗಿ ಸದನದ ಸದಸ್ಯರೆಲ್ಲರೂ ಎದ್ದುನಿಂತು ಶ್ರದ್ಧಾಂಜಲಿ ಸಲ್ಲಿಸಿದರು.

'ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಉತ್ತಮ ಸಾಹಿತಿ, ಬರಹಗಾರರಾಗಿದ್ದರು. ತಮ್ಮ ವಿಶಿಷ್ಟ ಬರಹಗಳ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದ್ದಾರೆ. ಇದೇ ವೇಳೆ ಪ್ರಾರ್ಥನಾ ಶಾಲೆಯನ್ನು ಸ್ಥಾಪಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯವನ್ನು ಅವರು ಮಾಡಿದ್ದಾರೆ'

-ಎನ್.ಮಹೇಶ್ , ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News