×
Ad

ಶೀಘ್ರದಲ್ಲಿಯೇ ಕೊರೋನ ಸೋಂಕಿಗೆ ಲಸಿಕೆ ಲಭ್ಯ: ಸಚಿವ ಡಾ.ಸುಧಾಕರ್

Update: 2020-12-07 22:10 IST

ಬೆಂಗಳೂರು, ಡಿ.7: ವೈಜ್ಞಾನಿಕವಾಗಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಸಿಎಂಆರ್ ದೃಢೀಕರಿಸುವವರೆಗೂ ಕೊರೋನಗೆ ಲಸಿಕೆಯು ಅಧಿಕೃತವಾಗಿ ಸಿಗುತ್ತದೆಂದು ಹೇಳಲಾಗುವುದಿಲ್ಲ. ಆದರೆ, ಶೀಘ್ರದಲ್ಲಿಯೇ ಕೊರೋನ ಸೋಂಕಿಗೆ ಲಸಿಕೆ ಲಭ್ಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಮೇಲ್ಮನೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಸುಧಾಕರ್, ವಿಶ್ವದಲ್ಲಿ 50 ಕಡೆಗಳಲ್ಲಿ ಲಸಿಕೆಯನ್ನು ಕಂಡು ಹಿಡಿಯುವ ಕೆಲಸ ನಡೆಯುತ್ತಿದ್ದು, 25 ಕಡೆಗಳಲ್ಲಿ ಮೂರನೇ ಹಂತದ ಪ್ರಯೋಗ ನಡೆದಿದೆ. ಆದರೆ, ಇದುವರೆಗೂ ಯಾವುದೇ ಲಸಿಕೆಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಡಬ್ಲೂಎಚ್‍ಒ ಹಾಗೂ ಐಸಿಎಂಆರ್ ದೃಢೀಕರಿಸುವವರೆಗೂ ಯಾವುದೇ ಲಸಿಕೆಯು ಅಧಿಕೃತವಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕೊರೋನ ಲಸಿಕೆ ಹಂಚಿಕೆಗಾಗಿ ಈಗಾಗಲೇ ತಯಾರಿ ನಡೆದಿದೆ. ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಐದು ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ತಯಾರಿ ನಡೆಸಲಾಗಿದೆ. 1.10 ಲಕ್ಷಕ್ಕೂ ಅಧಿಕ ಜನರು ಲಸಿಕೆ ಹಂಚಿಕೆ ಮಾಡಲು ಸಿದ್ಧರಿದ್ದಾರೆ. ಲಸಿಕೆ ಶೇಖರಿಸಿಡಲು ಎಲ್ಲ ರೀತಿಯ ತಯಾರಿಯೂ ನಡೆದಿದೆ ಎಂದು ಅವರು ತಿಳಿಸಿದರು.

ಕೊರೋನ ಲಸಿಕೆಯನ್ನು ಹೇಗೆ ತಗೋಬೇಕು ಎಂಬುದರ ಕುರಿತು ಅಂತಿಮವಾಗಿಲ್ಲ. ಒಂದು ಬಾರಿ ತಗೋಬೇಕಾ, ಎರಡು ಬಾರಿ ತಗೋಬೇಕಾ ಎಂಬುದು ಚರ್ಚೆಯಲ್ಲಿದೆ. ಕೊರೋನ ಸೋಂಕು ತಗಲುವ ಮುನ್ನವೇ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಹಂತದಲ್ಲಿ ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಲಸಿಕೆಯನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

121 ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್: ಪ್ರಶ್ನೋತ್ತರ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳು ಕೊರೋನ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿವೆ ಎಂದು ಪರಿಷತ್ತಿನ ಸದಸ್ಯರು ಸಚಿವರ ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರೋಗಿಗಳಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆಸ್ಪತ್ರೆಗಳ ವಿರುದ್ಧ ದೂರುಗಳು ಬಂದಲ್ಲಿ, ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಹಲವು ಕಡೆ ನಡೆದಿರಬಹುದು. ಆದರೆ, ಹಂತ ಹಂತವಾಗಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಸರಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ 121 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News