ದುರ್ಬಲರನ್ನು ಶಿಕ್ಷಣದಿಂದ ದೂರವಿಡುವ ಸಂಚು?

Update: 2020-12-08 05:07 GMT

ಕಳೆದ ಆರು ವರ್ಷಗಳಿಂದ ಸಾರ್ವಜನಿಕ ಸೇವಾ ಕ್ಷೇತ್ರಗಳಿಗೆ ಅನುದಾನಗಳು ಇಳಿಕೆಯಾಗುತ್ತಾ ಬರುತ್ತಿವೆ. ಪರಿಣಾಮವಾಗಿ ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳ ಮೇಲೆ ಭಾರೀ ದುಷ್ಪರಿಣಾಮಗಳಾಗಿವೆ. ಇದರ ನೇರ ಫಲಾನುಭವಿಗಳು ಸಮಾಜದ ಶೋಷಿತ ಸಮುದಾಯಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೀಸಲಾತಿಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಬಂದಿರುವ ಸರಕಾರ, ಒಂದೆಡೆ ಶೋಷಿತ ಸಮುದಾಯಗಳು ಫಲಾನುಭವಿಗಳಾಗಿರುವ ಸಾರ್ವಜನಿಕ ಕ್ಷೇತ್ರಗಳಿಗೆ ನೀಡುವ ಅನುದಾನಗಳಿಗೂ ಕತ್ತರಿ ಹಾಕುತ್ತಾ ಬರುತ್ತಿದೆ. ಇದರ ಜೊತೆಗೇ ಮೇಲ್ಜಾತಿಗೆ ಶೇ. 10ರಷ್ಟು ಮೀಸಲಾತಿಯನ್ನು ಘೋಷಿಸಲಾಗಿದೆ. ದುರ್ಬಲರನ್ನು ಇನ್ನಷ್ಟು ದುರ್ಬಲರಾಗಿಸುತ್ತಾ, ಮೇಲ್ಜಾತಿಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ದಿಕ್ಕಿನೆಡೆಗೆ ಸರಕಾರ ಮುನ್ನಡೆಯುತ್ತಿದೆ. ಸದ್ಯಕ್ಕೆ ಸರಕಾರಿ ಉದ್ಯೋಗಗಳೇ ಹೊಸದಾಗಿ ಸೃಷ್ಟಿಯಾಗದೇ ಇರುವುದರಿಂದ ಮತ್ತು ಇರುವ ಸಾರ್ವಜನಿಕ ಸಂಸ್ಥೆಗಳು ಹಂತ ಹಂತವಾಗಿ ಖಾಸಗೀಕರಣಗೊಳ್ಳುತ್ತಿರುವುದ ರಿಂದ ದುರ್ಬಲರ ಪಾಲಿಗೆ ಮೀಸಲಾತಿಯೆನ್ನುವುದು ಹೆಸರಿಗಷ್ಟೇ ಅಸ್ತಿತ್ವದಲ್ಲಿದೆ. ಇರುವ ಮೀಸಲಾತಿಗಳನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ. ಆದುದರಿಂದ, ದಲಿತರಿಗಾಗಿ, ದುರ್ಬಲವರ್ಗಕ್ಕಾಗಿ ಮೀಸಲಿರಿಸಿದ ಉದ್ಯೋಗಗಳು ಖಾಲಿ ಬಿದ್ದಿವೆ. ಇವುಗಳನ್ನು ತುಂಬುವ ಕುರಿತಂತೆ ಸರಕಾರಕ್ಕೆ ಯಾವ ಆಸಕ್ತಿಯೂ ಇಲ್ಲ.

ಲಾಕ್‌ಡೌನ್ ದಿನಗಳ ಬಳಿಕ ಶಿಕ್ಷಣ ವಲಯದಲ್ಲಿ, ಜ್ಞಾನ ಕ್ಷೇತ್ರದಲ್ಲಾಗಿರುವ ಭಾರೀ ನಷ್ಟವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆರ್ಥಿಕ ಕ್ಷೇತ್ರದಲ್ಲಾಗಿರುವ ನಷ್ಟವನ್ನು ಲೆಕ್ಕ ಹಾಕಿದಂತೆ, ಶಿಕ್ಷಣ ಕ್ಷೇತ್ರದಲ್ಲಾಗಿರುವ ನಷ್ಟವನ್ನು ಅಳೆಯಲು ಸರಿಯಾದ ಮಾನದಂಡಗಳಿಲ್ಲದೆ ಇರುವುದರಿಂದ, ಶಾಲೆಗಳು ಇನ್ನೂ ತೆರೆದಿಲ್ಲ. ಇದೇ ಸಂದರ್ಭದಲ್ಲಿ ಮೊಬೈಲ್ ಇದ್ದವರು ಮತ್ತು ಇಲ್ಲದವರು ಎಂದು ಶಿಕ್ಷಣ ಕ್ಷೇತ್ರ ಸ್ಪಷ್ಟವಾಗಿ ಇಬ್ಭಾಗವಾಗಿದೆ. ಒಂದು ವರ್ಗ ಆನ್‌ಲೈನ್ ಸೌಲಭ್ಯಗಳ ಮೂಲಕ ಶಿಕ್ಷಣವನ್ನು ಪಡೆಯುತ್ತಿದ್ದರೆ, ಇನ್ನೊಂದು ವರ್ಗ ಮೊಬೈಲ್, ಇಂಟರ್‌ನೆಟ್ ಇತ್ಯಾದಿಗಳು ಇಲ್ಲ ಎನ್ನುವ ಕಾರಣಕ್ಕಾಗಿಯೇ ಶಿಕ್ಷಣದಿಂದ ವಂಚಿತವಾಗಿದೆ. ಮೊಬೈಲ್‌ಗಳಿದ್ದರೂ ನೆಟ್‌ವರ್ಕ್ ಇಲ್ಲ, ಇಂಟರ್‌ನೆಟ್ ರೀಚಾರ್ಜ್ ಮಾಡಿಲ್ಲ ಎಂದೂ ವಿದ್ಯಾರ್ಥಿಗಳು ತರಗತಿಗಳಿಂದ ಹೊರಗುಳಿಯುತ್ತಿದ್ದಾರೆ. ಹೀಗೆ ತರಗತಿಗಳಿಂದ ಹೊರಹಾಕಲ್ಪಟ್ಟವರಲ್ಲಿ ಶೇ. 75ರಷ್ಟು ದುರ್ಬಲ ಸಮುದಾಯಕ್ಕೆ ಸೇರಿದವರು ಎನ್ನುವುದನ್ನು ಅಂಕಿ ಅಂಶಗಳು ಹೇಳುತ್ತವೆ. ಶಿಕ್ಷಣವನ್ನು ಶಾಶ್ವತವಾಗಿ ಆನ್‌ಲೈನ್‌ಗೆ ಅಳವಡಿಸುವ ಪ್ರಯೋಗಕ್ಕೆ ರಾಜ್ಯವನ್ನು ಬಲಿಪಶು ಮಾಡಲಾಗಿದೆಯೆ ಎನ್ನುವ ಸಂಶಯ ಜನರಲ್ಲಿ ಎದ್ದಿದೆ. ಆರ್ಥಿಕವಾಗಿ ಭಾರತ ಸರ್ವನಾಶವಾಗಿರುವ ಈ ಸಂದರ್ಭದಲ್ಲಿ, ಸರಕಾರಿ ಶಾಲೆಗಳಿಗಾಗಿ ಹಣ ವ್ಯಯಮಾಡುವುದು ದುಂದುವೆಚ್ಚವಾಗಿ ಸರಕಾರಕ್ಕೆ ಭಾಸವಾಗುತ್ತಿದೆ. ಪರಿಣಾಮವಾಗಿ, ಭವಿಷ್ಯದಲ್ಲಿ ಆನ್‌ಲೈನ್ ಶಿಕ್ಷಣವನ್ನೇ ಶಾಶ್ವತವಾಗಿಸಿದರೆ ಕೋಟ್ಯಂತರ ರೂಪಾಯಿಯನ್ನು ಉಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಸರಕಾರವಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಆ ಕಾರಣಕ್ಕಾಗಿಯೇ, ಶಾಲೆಗಳನ್ನು ತೆರೆಯುವುದನ್ನು ಹಂತ ಹಂತವಾಗಿ ಮುಂದೂಡಲಾಗುತ್ತಿದೆ. ಆನ್‌ಲೈನ್ ಶಾಲೆಗಳನ್ನು ತೆರೆಯುವ ಮೂಲಕ ಅನುದಾನಗಳನ್ನು ಉಳಿಸುವುದಷ್ಟೇ ಅಲ್ಲ, ಶಾಲೆಗಳಿಗಾಗಿ ಮೀಸಲಿಟ್ಟ ಜಮೀನು, ಮೈದಾನಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಿ ಬೊಕ್ಕಸ ತುಂಬಿಸುವ ದುರಾಸೆಯೂ ಸರಕಾರದ ಬಳಿಯಿದೆ ಎನ್ನಲಾಗುತ್ತಿದೆ. ಸರಕಾರದ ಈ ದುಷ್ಟ ದೋರಣೆಯ ನೇರ ಫಲಾನುಭವಿಗಳು ಈ ದೇಶದ ದಲಿತ, ಶೂದ್ರ, ಅಲ್ಪಸಂಖ್ಯಾತ ಸಮುದಾಯಕ್ಕೆಸೇರಿದ ಬಡವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡು ಸರಕಾರ, ದುರ್ಬಲ ಸಮುದಾಯಗಳ ಶಿಕ್ಷಣಕ್ಕಾಗಿ ಮೀಸಲಿಟ್ಟ ಹತ್ತು ಹಲವು ಸವಲತ್ತುಗಳಿಗೆ ಕತ್ತರಿ ಹಾಕಲು ಹೊರಟಿರುವ ಆತಂಕಕಾರಿ ವರದಿಗಳೂ ಹೊರ ಬೀಳುತ್ತಿವೆ. ಯಡಿಯೂರಪ್ಪ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿಡುವ ಹಣವನ್ನು ಹಂತ ಹಂತವಾಗಿ ಇಳಿಕೆ ಮಾಡತೊಡಗಿದೆ. ಇದರ ನೇರ ಪರಿಣಾಮ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಬೆಳವಣಿಗೆಗಳ ಮೇಲೆ ಬೀರುತ್ತಿದೆೆ.

ಸರಕಾರದ ಯೋಜನೆಗಳಾದ ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರಿಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ಆನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಯೋಜನೆಗಳ 2019-20ನೇ ಸಾಲಿನ ಅನುದಾನ ಇನ್ನೂ ಬಿಡುಗಡೆಗೊಂಡಿಲ್ಲ. ಲಾಕ್‌ಡೌನ್‌ನ ಈ ಕಾಲದಲ್ಲಿ ವಿದ್ಯಾರ್ಥಿಗಳ ಗಾಯಗಳಿಗೆ ಸರಕಾರ ಈ ಮೂಲಕ ಬರೆ ಎಳೆದಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಸಂಶೋಧನಾ ಅಧ್ಯಯನಗಳಿಗಾಗಿ ಮೀಸಲಿಟ್ಟಿದ್ದ ಮಾಸಿಕ 25,000 ರೂ. ಪ್ರೋತ್ಸಾಹ ಧನ 8,000 ರೂಪಾಯಿಗೆ ಇಳಿದಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ವಿದ್ಯಾರ್ಥಿ ವೇತನಗಳಿಗಾಗಿ 270 ಕೋಟಿ ರೂಪಾಯಿ ಅನುದಾನ ನಿಗದಿಗೊಳಿಸಿದೆಯಾದರೂ, 2019-20ರ ಸಾಲಿನ ಅನುದಾನ ಇನ್ನೂ ಬಿಡುಗಡೆ ಮಾಡಿಯೇ ಇಲ್ಲ. ಶುಲ್ಕ ವಿನಾಯಿತಿಗಾಗಿ ನಿಗದಿ ಪಡಿಸಿದ ಅನುದಾನವೂ ಬಿಡುಗಡೆಗೊಂಡಿಲ್ಲ. ಅರಿವು ಯೋಜನೆಯ ಮೂಲಕ ನೀಡಲಾಗುತ್ತಿದ್ದ ಶೈಕ್ಷಣಿಕ ಸಾಲವನ್ನು ಶೇ. 50ಕ್ಕೆ ಕಡಿತಗೊಳಿಸಲಾಗಿದೆ.

ವಿದ್ಯಾಸಿರಿ ಅನುದಾನ ನಿಂತು ಹೋಗಿದೆ. ಸರಕಾರದ ಈ ನೀತಿ ಕೇವಲ ಅಲ್ಪಸಂಖ್ಯಾತರಿಗಷ್ಟೇ ಸೀಮಿತವಾಗಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತುಗಳನ್ನೂ ಹಂತ ಹಂತವಾಗಿ ಕಡಿತಗೊಳಿಸಲು ಸರಕಾರ ಯೋಚಿಸುತ್ತಿದೆ. 1944ರಿಂದಲೂ ಜಾರಿಯಲ್ಲಿದ್ದ ಮೆಟ್ರಿಕ್ ಆನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ ಶಿಪ್ ಯೋಜನೆ ಕಡಿತಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ವಿವಿಧ ವಲಯಗಳ ಗಣ್ಯರು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೊದಲು ಈ ಯೋಜನೆಯ ಸಂಪೂರ್ಣ ಹೊಣೆಯನ್ನು ಕೇಂದ್ರ ಸರಕಾರ ವಹಿಸಿಕೊಂಡಿತ್ತು. ಆದರೆ 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಹಾಗೂ ರಾಜ್ಯ ಕ್ರಮವಾಗಿ ಶೇ. 60 ಮತ್ತು ಶೇ. 40ರಷ್ಟು ಅನುದಾನ ಹಂಚಿಕೆ ಮಾಡಿ ಪುನರ್ ರೂಪಿಸಲಾಗಿದೆ. ಇದೀಗ ಆರ್ಥಿಕ ಹೊರೆಯಿಂದಾಗಿ ರಾಜ್ಯ ಸರಕಾರ ಈ ಸ್ಕಾಲರ್‌ಶಿಪ್‌ನ್ನು ನೀಡುವ ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ.

ದಲಿತ ಸಮುದಾಯ ಶಿಕ್ಷಣದ ಮೂಲಕ ಸರಕಾರವನ್ನು, ಅದರ ಬೆನ್ನಿಗಿರುವ ಸಂಘಪರಿವಾರವನ್ನು ಪ್ರಶ್ನಿಸುವಷ್ಟು ಬಲಾಢ್ಯವಾಗುತ್ತಿರುವುದನ್ನು ಅರಿತು, ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತಿದೆ ಎನ್ನುವುದು ದಲಿತ ನಾಯಕರು, ಸಾಮಾಜಿಕ ಹೋರಾಟಗಾರರ ಆರೋಪವಾಗಿದೆ. ಇತ್ತೀಚೆಗಷ್ಟೇ ಒಬ್ಬ ಟಿವಿ ಪತ್ರಕರ್ತ ‘ಯುಪಿಎಸ್‌ಸಿ ಜಿಹಾದ್’ ಎನ್ನುವ ಪದವನ್ನು ಬಳಸಿದ್ದ. ಮುಸ್ಲಿಮ್ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಸಾಧನೆಗಳನ್ನು ಗಮನಿಸಿ ಆತ ಈ ಹೇಳಿಕೆಯನ್ನು ನೀಡಿದ್ದ. ಮುಸ್ಲಿಮ್ ವಿದ್ಯಾರ್ಥಿಗಳು ಅತ್ಯುನ್ನತ ಶಿಕ್ಷಣಗಳನ್ನು ಪಡೆದು ದೇಶದ ಉನ್ನತ ಹುದ್ದೆಗಳನ್ನು ತನ್ನದಾಗಿಸುತ್ತಿದ್ದಾರೆ ಎನ್ನುವುದು ಈತನ ಆರೋಪವಾಗಿತ್ತು. ದಲಿತರ ಕುರಿತಂತೆಯೂ ಮೇಲ್ಜಾತಿಯ ಮನಸ್ಥಿತಿ ಇದೇ ಆಗಿದೆ. ಸರಕಾರದ ಸೌಲಭ್ಯಗಳನ್ನು ಪಡೆದು ಉನ್ನತ ಶಿಕ್ಷಣವನ್ನು ತನ್ನದಾಗಿಸಿ ದಲಿತರು ಕೊಬ್ಬುತ್ತಿದ್ದಾರೆ ಎನ್ನುವ ಅಸಹನೆಯನ್ನು ಮೇಲ್ಜಾತಿಗೆ ಸೇರಿದ ಕೆಲ ಮುಖಂಡರು ಬಹಿರಂಗವಾಗಿ ವ್ಯಕ್ತಪಡಿಸಿದ್ದಿವೆ. ಆ ಕಾರಣದಿಂದ, ವ್ಯವಸ್ಥಿತವಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಶೂದ್ರ ಕೆಳಜಾತಿಯ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಇಡುವುದಕ್ಕೆ ಸಂಚು ನಡೆಯುತ್ತಿದೆಯೇ ಎಂಬ ಅನುಮಾನ ಎಲ್ಲರನ್ನು ಕಾಡತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News