ಜ.15ರೊಳಗೆ ಆರೋಗ್ಯ ಇಲಾಖೆಗೆ 2,158 ಹುದ್ದೆ ಭರ್ತಿ: ಆರೋಗ್ಯ ಸಚಿವ ಸುಧಾಕರ್

Update: 2020-12-07 17:36 GMT

ಬೆಂಗಳೂರು, ಡಿ.7: ಗ್ರಾಮೀಣ ಪ್ರದೇಶವನ್ನು ಒಳಗೊಂಡಂತೆ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಜನವರಿ-15ರೊಳಗೆ ಆರೋಗ್ಯ ಇಲಾಖೆಗೆ ಅಗತ್ಯವಿರುವ 2,158 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಆರು ತಿಂಗಳ ಮಟ್ಟಿಗೆ ಆರೋಗ್ಯ ತಜ್ಞರು ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿತ್ತು. ಈಗ ರಾಜ್ಯದಲ್ಲಿ ಖಾಲಿಯಿರುವ 1,246 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, 88 ದಂತ ಆರೋಗ್ಯಾಧಿಕಾರಿ, 824 ತಜ್ಞ ವೈದ್ಯರ ಹುದ್ದೆಗಳನ್ನು ವಿಶೇಷ ನೇಮಕವಾಗಿ ನಿಯಮಗಳ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನೇಮಿಸಿಕೊಂಡಿರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಅವರ ಸೇವೆಯನ್ನು ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಕೋವಿಡ್ ಚಿಕಿತ್ಸೆಗೆ ಅನುಗುಣವಾಗಿ ತಾಲೂಕು ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್ ಕೊನೆಯ ವಾರದಿಂದ ಫೆಬ್ರವರಿವರೆಗೆ ಕೋವಿಡ್ ಎರಡನೇ ಅಲೆ ಬರಬಹುದೆಂಬ ತಜ್ಞರ ಸಲಹ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಯನ್ನು ಹೇಗೆ ಆಚರಿಸಬೇಕು. ಈ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚಿಸಿ ಎರಡು-ಮೂರು ದಿನದೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News