ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಪಡೆ ಅಧ್ಯಕ್ಷರಾಗಿ ರಂಗನಾಥ್ ನೇಮಕ ಎಷ್ಟು ಸರಿ: ಎಚ್.ವಿಶ್ವನಾಥ್ ಪ್ರಶ್ನೆ

Update: 2020-12-07 18:01 GMT

ಬೆಂಗಳೂರು, ಡಿ.7: ಆರ್ಥಿಕ ಅಪರಾಧ ಹಿನ್ನೆಲೆಯನ್ನು ಹೊಂದಿರುವ ಕಾಫಿ ಡೇ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ವಿ.ರಂಗನಾಥ್ ಅವರನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ನೇಮಿಸಿರುವುದು ಎಷ್ಟು ಸರಿ ಎಂದು ಶಾಸಕ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ವಿಧಾನಪರಿಷತ್‍ನಲ್ಲಿ ನೂತನ ಶಿಕ್ಷಣ ನೀತಿಯ ಕುರಿತು ಚರ್ಚೆಯ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರೂ ಶಿಕ್ಷಣ ತಜ್ಞರೇ ಇಲ್ಲವೆ. ಕೂಡಲೇ ಎಸ್.ವಿ.ರಂಗನಾಥರನ್ನು ಶಿಕ್ಷಣ ನೀತಿ ಕಾರ್ಯಪಡೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಉತ್ತಮರನ್ನು ನೇಮಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ವೇಳೆ ಶಾಸಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಪ್ರತಿಪಕ್ಷಗಳೊಂದಿಗೆ ಚರ್ಚೆ ನಡೆಸದೆ ಜಾರಿಗೆ ತರಲಾಗುತ್ತಿದೆ. ಸಂಸತ್‍ನಲ್ಲಿ ಬಹುಮತ ಸಿಕ್ಕಿದೆಯೆಂಬ ಒಂದೇ ಕಾರಣದಿಂದ ಯಾವುದೇ ಚರ್ಚೆಗಳಿಲ್ಲದೆ ಕಾನೂನುಗಳನ್ನು ಜಾರಿ ಮಾಡುವ ಮುನ್ನ, ದೇಶದ ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.

ಭಾರತೀಯ ಶಿಕ್ಷಣ ಮಂಡಲ್, ಭಾರತೀಯ ಭಾಷಾ ಮಂಚ್ ಕೊಟ್ಟಿರುವ ವರದಿಗಳನ್ನೇ ಆಧರಿಸಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಈ ಸಂಸ್ಥೆಗಳ ಹಿನ್ನೆಲೆ ಏನು, ಎಷ್ಟು ವಿಶ್ವಾಸಾರ್ಹತೆಯನ್ನು ಹೊಂದಿವೆ ಎಂಬುದನ್ನು ಸರಕಾರ ಮಾಹಿತಿ ನೀಡಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News