ಉಪ್ಪಿನಂಗಡಿಯಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಕ್ರಮ: ಡಿಸಿಎಂ ಗೋವಿಂದ ಕಾರಜೋಳ

Update: 2020-12-07 18:20 GMT

ಬೆಂಗಳೂರು, ಡಿ. 7: ಪುತ್ತೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಬರುವ ಉಪ್ಪಿನಂಗಡಿ ಪಟ್ಟಣದಲ್ಲಿರುವ ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಪ್ರವಾಸಿ ಮಂದಿರವನ್ನು 2021-22ರ ಸಾಲಿನ ಅನುದಾನದಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸಂಜೀವ್ ಮಠಂದೂರ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಪ್ರಸ್ತುತ ಪ್ರವಾಸಿ ಮಂಡಿದ ಅತ್ಯಂತ ಶಿಥಿಲಾವಸ್ಥೆಯಲ್ಲಿರುವುದರಿಂದ ನವೀಕರಣ ಮಾಡುವುದು ಸೂಕ್ತವಾಗಿರುವುದಿಲ್ಲ. ಆದುದರಿಂದ ಈಗಾಗಲೇ ಸದರಿ ಸ್ಥಳದ ಗಡಿ ಗುರುತಿಸಿ, ಜಾಗದ ಸರ್ವೆ ಮಾಡಲಾಗಿದೆ ಎಂದರು.

ಪುತ್ತೂರು ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿನ ಉಪ್ಪಿನಂಗಡಿ ಪಟ್ಟಣದಲ್ಲಿ ಪ್ರವಾಸಿ ಮಂದಿರದ ಅಗತ್ಯವಿದೆ. ಮುಂದಿನ ಸಾಲಿನ ಅನುದಾನದಲ್ಲಿ ಆದ್ಯತೆ ಮೇಲೆ ಈ ಪಟ್ಟಣದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಿಸಲು ರಾಜ್ಯ ಸರಕಾರ ಕ್ರಮ ವಹಿಸಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ಮರು ಟೆಂಡರ್ ಗೆ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯಲ್ಲಿನ ಗುರುಪುರ-ಕೈಕಂಬ ಸೇರಿದಂತೆ ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದರೆ ಅವುಗಳನ್ನು ಮರು ಟೆಂಡರ್ ಕರೆದು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಆಡಳಿತ ಪಕ್ಷದ ಸದಸ್ಯ ಉಮಾನಾಥ್ ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 2017-18, 2018-19, 2019-20ನೆ ಸಾಲಿನಲ್ಲಿ ಮೂಡಬಿದ್ರೆ ಕ್ಷೇತ್ರದಲ್ಲಿ ಹಲವು ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದರು.

ಕ್ಷೇತ್ರ ವ್ಯಾಪ್ತಿಯ ಗುರುಪುರ, ಕೈಕಂಬ ರಸ್ತೆ ಅಭಿವೃದ್ಧಿಗೆ ಶರೀಫ್ ಕನ್ಸಷ್ಟ್ರಕ್ಷನ್ ಕಂಪೆನಿಗೆ ನೀಡಿದ್ದು, ಇದೀಗ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮರು ಟೆಂಡರ್ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News