×
Ad

'ಭಾರತ್ ಬಂದ್'ಗೆ ಮೈಸೂರಿನಲ್ಲಿ ವ್ಯಾಪಕ ಬೆಂಬಲ: ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್

Update: 2020-12-08 13:42 IST

ಮೈಸೂರು: ಭಾರತ್ ಬಂದ್ ಗೆ ಮೈಸೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.

ಮಂಗಳವಾರ ಬೆಳಗ್ಗೆಯೇ ನಗರದ ಗ್ರಾಮಾಂರ ಬಸ್ ನಿಲ್ದಾಣಕ್ಕೆ ಜಮಾಯಿಸಿದ ರೈತರು ಬಸ್ ಗಳ ಸಂಚಾರವನ್ನು ತಡೆದರು. ನಂತರ ಅಲ್ಲಿಂದ ಇರ್ವಿನ್ ರಸ್ತೆ ಮೂಲಕ ಸಾಗಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಕೆಲವು ಅಂಗಡಿಗಳು ಬಾಗಿಲಿ ತೆಗೆದಿದ್ದವು. ಈ ಸಂದರ್ಭದಲ್ಲಿ ರೈತರು ನಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು‌. ರೈತರ ಮನವಿಗೆ  ಸ್ಪಂದಿಸಿದ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.

ಮತ್ತೊಂದೆಡೆ ಮೈಸೂರು-ನಂಜನಗೂಡು ರಸ್ತೆಯ ಜೆಎಸ್ಎಸ್ ಕಾಲೇಜಿನ ಬಳಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ನೇತೃತ್ವದಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಯಿತು. ಕೊಂಬಿಯಾ ಏಷಿಯಾ ಆಸ್ಪತ್ರೆಯ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಲಿತ ಸಂಘಟನೆ, ಮತ್ತು ವಿವಿಧ ಪ್ರಗತಿಪರ ಮುಖಂಡರು, ರೈತ ಮುಖಂಡ ಹೊಸಕೋಟೆ ಬಸವರಾಜು, ಹಿರಿಯ ಸಮಾಜವಾದಿ ಪ‌ಮಲ್ಲೇಶ್ ನೇತೃತ್ವದಲ್ಲಿ ಅಶೋಕ ರಸ್ತೆ, ದೇವರಾಜ ಅರಸು ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿದ ರೈತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಆಗಮಿಸಿ ಪ್ರತಿಭಟನೆ ನಡೆಸಿ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ಇದೇ ವೇಳೆ ಆಗಮಿಸಿದ ಖ್ಯಾತ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಕೃಷಿ ಸಂಬಂಧ ಕಾನೂನು ರೂಪಿಸುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲಿದೆ. ಆದರೆ ರಾಜ್ಯ ಸರ್ಕಾರಗಳು ಪ್ರಶ್ನೆಯನ್ನೇ ಮಾಡುತ್ತಿಲ್ಲ, ಜಿಎಸ್ಟಿ ತಂದು ರಾಜ್ಯಗಳ ಜುಟ್ಟನ್ನು ಕೇಂದ್ರ ಸರ್ಕಾರ ಹಿಡಿದಿದೆ. ಸಂವಿವಧಾನದ ಪ್ರಕಾರ ಕೃಷಿ ಸಂಬಂಧಿಸಿದ ಕಾನೂನು ರೂಪಿಸುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ರೈತರನ್ನು ಕೇಳದೆ, ಸಂಸತ್ ನಲ್ಲೂ ಚರ್ಚೆ ಮಾಡದೆ ಕೃಷಿ ವಿರೋಧಿ ಕಾನೂನುಗಳನ್ನು ತರುವ ಮೂಲಕ ಸರ್ವಾಧಿಕಾರಿ ಆಡಳಿತ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಕೊರೆಯುವ ಚಳಿ ಇದ್ದಿರೂ ಪ್ರತಿಭಟನಾ ನಿರತ ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡಲಾಗಿದೆ. ರೈತರನ್ನು ಇಭ್ಬಾಗ ಮಾಡಿ ಹೋರಾಟವನ್ನು ಹತ್ತಿಕ್ಕಲು ನಾನಾ ರೀತಿಯ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಂಘಪರಿವಾರ ಎನ್ನುವುದು ವಂಚನೆ ದ್ರೋಹ ಗುಣಲಕ್ಷಣಗಳನ್ನು ಹೊಂದಿದೆ. ಅದನ್ನು ಅವರು ಬದಲಾಯಿಸಿಕೊಂಡರೆ ಮಾತ್ರ ದೇಶಕ್ಕೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ದೇಶ ಛಿದ್ರವಾಗುತ್ತದೆ ಎಂದು ಹೇಳಿದರು.

ರೈತ ಸಂಘಟನೆಯ ಮುಖಂಡರು ಜಿಲ್ಲಾಧ್ಯಕ್ಷ ವಿದ್ಯಾಸಾಗರ ನೇತೃತ್ವದಲ್ಲಿ ಗನ್ ಹೌಸ್ ವೃತ್ತದಿಂದ ನೂರಡಿ ರಸ್ತೆ ಮೂಲಕ ಜಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನೆ ವ್ಯಕ್ತಪಡಿಸಿದರು. ಇದೇ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ಪ್ರತಭಟನೆಯಲ್ಲಿ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಉಗ್ರನರಸಿಂಹೇಗೌಡ, ಪ.ಮಲ್ಲೇಶ್, ಚಂದ್ರಶೇಖರ ಮೇಟಿ, ಸಂಧ್ಯಾ ಪಿ, ಉಮಾದೇವಿ, ಪಂಡಿತಾರಾಧ್ಯ, ರತಿರಾವ್, ಡಾ.ವಿ.ಲಕ್ಷ್ಮಿನಾರಾಯಣ್, ಭಾಗವಹಿಸಿದ್ದರು.

ಸಾಮೂಹಿಕ ನಾಯಕತ್ವ ರೈತ ಸಂಘದ ವಿದ್ಯಾಸಾಗರ್, ಕನ್ನಡ ಚಳುವಳಿ ಬಿ.ಎ.ಶಿವಶಂಕರ್, ದಸಂಸ ಮುಖಂಡರಾದ ಕಾರ್ಯ ಬಸವಣ್ಣ, ಮಲ್ಲಹಳ್ಳಿ ನಾರಾಯಣ, ಜನಸಂಗ್ರಾಮ ಪರಿಷತ್ ನ ನಗರ್ಲೆ ವಿಜಯಕುಮಾರ್, ಎಎಪಿ ಪಕ್ಷದ ಮಾಲವಿಕ ಗುಬ್ಬಿವಾಣಿ, ಮಂಜು ಕಿರಣ್ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News