ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು: ಸಚಿವ ಮಾಧುಸ್ವಾಮಿ ಭರವಸೆ
ಬೆಂಗಳೂರು, ಡಿ. 8: ಮಂಗಳೂರಿನ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ವೀರಪುರುಷ ಕೋಟಿ ಚೆನ್ನಯ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು' ಎಂದು ಹೆಸರಿಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಸರಕಾರ ಕ್ರಮ ವಹಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಉಮಾನಾಥ ಕೋಟ್ಯಾನ್ ಪ್ರಸ್ತಾಪಿಸಿದ ವಿಚಾರಕ್ಕೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ವೀರಪುರುಷ ಕೋಟಿ ಚೆನ್ನಯ ಅವರ ಹೆಸರಿಡುವ ಬಗ್ಗೆ ಪರಿಶೀಲನೆ ನಡೆಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವುದು ಎಂದು ಹೇಳಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ, ಹೊರರಾಜ್ಯಗಳು, ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ವ್ಯಕ್ತಿ, ದೈವದಂತೆ ಆರಾಧನೆ ಮಾಡುತ್ತಿರುವ ವೀರಪುರುಷ ಕೋಟಿ ಚೆನ್ನಯ ಅವರ ಹೆಸರಿಡಬೇಕು. ಈಗಾಗಲೇ ಮಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರಪುರುಷ ಕೋಟಿ ಚೆನ್ನಯ ಅವರ ಹೆಸರಿಡಬೇಕು ಎಂದು ಒತ್ತಾಯಿಸಿ ಮಂಗಳೂರಿನಲ್ಲಿ ರ‍್ಯಾಲಿ, ಪ್ರತಿಭಟನೆ, ಸತ್ಯಾಗ್ರಹಗಳನ್ನು ಜನತೆ ನಡೆಸುತ್ತಿದ್ದಾರೆ. ಹೀಗಾಗಿ ಸರಕಾರ ಈ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸರಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್, ತುಳು ನಾಡಿನ ಪ್ರಸಿದ್ಧ ವ್ಯಕ್ತಿಯಾಗಿರುವ ಕೋಟಿ ಚೆನ್ನಯ ಅವರ ಹೆಸರನ್ನು ಮಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ಕೋರಿ ಸರಕಾರ ಕೂಡಲೇ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.