ಜೆಡಿಎಸ್ ಬೆಂಬಲದೊಂದಿಗೆ ಪರಿಷತ್ ನಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರ
ಬೆಂಗಳೂರು, ಡಿ.8: ಕಳೆದ ಅಧಿವೇಶನದಲ್ಲಿ ವಿಧಾನಪರಿಷತ್‍ನಲ್ಲಿ ಅಂಗೀಕಾರವಾಗದೆ ತಿರಸ್ಕೃತಗೊಂಡಿದ್ದ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ-2020ನ್ನು ಇಂದು ವಿಭಜನೆ(ಡಿವಿಷನ್) ಮೂಲಕ ಅಂಗೀಕೃತ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ವಿಧಾನಸಭೆಯಲ್ಲಿ ಕೃಷಿ ಮಸೂದೆಗಳನ್ನು ವಿರೋಧಿಸಿ ಸಭಾತ್ಯಾಗ ಮಾಡಿದ್ದ ಜೆಡಿಎಸ್, ವಿಧಾನಪರಿಷತ್‍ನಲ್ಲಿ ವಿಧೇಯಕವನ್ನು ಬೆಂಬಲಿಸಿದ್ದು ಕುತೂಹಲ ಮೂಡಿಸಿತು.
ಮಂಗಳವಾರ ವಿಧಾನಪರಿಷತ್‍ನಲ್ಲಿ ಬೆಳಗ್ಗೆಯಿಂದಲೇ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕ-2020ರ ಕುರಿತು ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಬಿ.ಕೆ.ಹರಿಪ್ರಸಾದ್, ಮರಿತಿಬ್ಬೇಗೌಡ ಸೇರಿದಂತೆ ಹಲವು ಸದಸ್ಯರು, ವಿಧೇಯಕದಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು. ನಂತರ ಕಂದಾಯ ಸಚಿವ ಆರ್.ಅಶೋಕ್, ವಿಧೇಯಕವನ್ನು ಸಮರ್ಥಿಸಿಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿ, ವಿಧೇಯಕವನ್ನು ಮಂಡಿಸಿ ಧ್ವನಿಮತದ ಮೂಲಕ ಅಂಗೀಕರಿಸಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿದರು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ-2020ನ್ನು ಓದುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ, ವಿಧೇಯಕವನ್ನು ವಿಭಜನೆಗೆ(ಡಿವಿಷನ್) ಹಾಕಬೇಕೆಂದು ಮನವಿ ಮಾಡಿದರು. ಈ ವೇಳೆ ಸಭಾನಾಯಕ ಶ್ರೀನಿವಾಸ ಪೂಜಾರಿ, ಈ ಹಿಂದಿನಿಂದಲೂ ಕೆಳಮನೆಯಿಂದ ಅಂಗೀಕೃತಗೊಂಡ ವಿಧೇಯಕವನ್ನು ಧ್ವನಿಮತಗಳ ಮೂಲಕವೇ ಅಂಗೀಕೃತಗೊಂಡಿದೆ. ಧ್ವನಿಮತಕ್ಕೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸದಸ್ಯರು ಒಪ್ಪದಿದ್ದಾಗ ಸಭಾಪತಿಗಳು ವಿಧೇಯಕವನ್ನು ವಿಭಜನೆಗೆ(ಡಿವಿಷನ್) ಹಾಕಿದರು.
ಜೆಡಿಎಸ್ ಬೆಂಬಲ: ಸಭಾಪತಿ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕವನ್ನು ವಿಭಜನೆ(ಡಿವಿಷನ್) ಮೂಲಕ ಮತಕ್ಕೆ ಹಾಕಿ, ವಿಧೇಯಕದ ಪರವಾಗಿ ಇರುವವರನ್ನು ಕ್ರಮಾನುಗತವಾಗಿ ಎದ್ದುನಿಲ್ಲುವಂತೆ ಹೇಳಿ ಸಂಖ್ಯೆಯನ್ನು ಬರೆದುಕೊಳ್ಳಲಾಗುತ್ತಿತ್ತು. ಈ ವೇಳೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರನ್ನು ಹೊರತುಪಡಿಸಿ ಕೊನೆ ಸಾಲಿನಲ್ಲಿ ಕುಳಿತಿದ್ದ ಬೋಜೇಗೌಡ ಸೇರಿದಂತೆ ಜೆಡಿಎಸ್ ಸದಸ್ಯರು ವಿಧೇಯಕದ ಪರವಾಗಿ ಎದ್ದು ನಿಲ್ಲುವ ಮೂಲಕ ಬೆಂಬಲ ಘೋಷಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಜೆಡಿಎಸ್ ಸದಸ್ಯರನ್ನು ಅಭಿನಂದಿಸಿದರು.
ವಿಧೇಯಕವನ್ನು ವಿಭಜನೆ(ಡಿವಿಷನ್)ಗೆ ಹಾಕಿದ್ದು ಒಳ್ಳೆಯದಾಯಿತು. ಜೆಡಿಎಸ್ ಸದಸ್ಯರು ವಿಧೇಯಕದ ಪರವಾಗಿದ್ದಾರೆಂಬುದು ಎಲ್ಲರಿಗೂ ತಿಳಿಯುವಂತಾಯಿತೆಂದು ಬಿಜೆಪಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ಜಾತ್ಯತೀತತೆಯ ಬಗ್ಗೆ ಮಾತನಾಡುವವರ ನಿಲುವು ಏನೆಂಬುದನ್ನು ನಾವು ತಿಳಿಯಬೇಕಾಗಿತ್ತು. ಈಗ ಅವರ ಬಣ್ಣ ಬಯಲಾಗಿದೆ ಎಂದರು. ಅಂತಿಮವಾಗಿ ವಿಧೇಯಕದ ಪರವಾಗಿ 37 ಹಾಗೂ ವಿರೋಧವಾಗಿ 21 ಮತಗಳು ಬೀಳುವ ಮೂಲಕ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕೃತಗೊಂಡಿತು.