×
Ad

'ಭಾರತ್ ಬಂದ್'ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ: ಕೇಂದ್ರ ಸರಕಾರದ ವಿರುದ್ಧ ರೈತರ ರಣಕಹಳೆ

Update: 2020-12-08 18:12 IST

ಬೆಂಗಳೂರು, ಡಿ.8: ಕೇಂದ್ರ ಸರಕಾರವು ರೈತ ವಿರೋಧಿ ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಸಂಘ-ಸಂಸ್ಥೆಗಳು ಮಂಗಳವಾರ ನಡೆಸಿದ “ಅಖಿಲ ಭಾರತ್ ಬಂದ್” ಚಳುವಳಿಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇಂದ್ರ ಸರಕಾರದ ವಿರುದ್ಧ ರೈತರು ರಣಕಹಳೆ ಮೊಳಗಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಕೊಂಚ ಇಳಿಕೆಯಾದರೆ ಹಲವು ಜಿಲ್ಲಾವಾರು ಭಾಗಗಳಲ್ಲಿ ಬಸ್‍ಗಳ ಸಂಚಾರ ಎಂದಿನಂತೆಯೇ ಇತ್ತು. ಆದರೆ, ಆಟೊ ಮತ್ತು ಟ್ಯಾಕ್ಸಿಗಳ ಸಂಚಾರ ಬಂದ್ ಆಗಿತ್ತು. ಹಾಲು, ತರಕಾರಿ, ಔಷಧ ಮಳಿಗೆಗಳು, ಆಸ್ಪತ್ರೆ, ಬ್ಯಾಂಕ್ ಹಾಗೂ ಸರಕಾರಿ ಕಚೇರಿಗಳು ಬಾಗಿಲು ತೆರೆದಿದ್ದವು.

ನಗರದ ಎಂ.ಜಿ.ರಸ್ತೆ, ಕೆಂಪೇಗೌಡ ರಸ್ತೆ ಸುತ್ತಮುತ್ತ ವಾಣಿಜ್ಯ ಮಳಿಗೆಗಳು ಬಹುತೇಕ ಬಂದ್ ಆಗಿದ್ದವು. ಅಲ್ಲಲ್ಲಿ ಕಿರಾಣಿ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು.

ಬೆಂಗಳೂರಿನ ಪುರಭವನ ಮುಂಭಾಗ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಸ್ತೆಯದ್ದಕ್ಕೂ ಮೆರವಣಿಗೆ ಸಾಗಿದರೆ, ಇಲ್ಲಿನ ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಫ್ರೀಡಂ ಪಾರ್ಕ್‍ ನಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು. ಮುಖ್ಯವಾಗಿ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಕುರುಬೂರು ಶಾಂತಕುಮಾರ್ ಮತ್ತು ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ರೂಪಗೊಂಡಿತ್ತು.

ಅದೇ ರೀತಿ, ವಿವಿಧೆಡೆ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ, ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು. ಇನ್ನು ಕೆಲವರು ರಸ್ತೆಯಲ್ಲೇ ಉರುಳು ಸೇವೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅರೆಬೆತ್ತಲೆ ಪ್ರತಿಭಟನೆ: ವಿಧಾನಸೌಧದ ಕಡೆಗೆ ರೈತ ಮುಖಂಡರ ಗುಂಪೊಂದು ನುಗ್ಗಲು ಹೊರಟಾಗ ಪೊಲೀಸರು ತಡೆದರು. ಈ ವೇಳೆ ರೈತರು ಅರೆಬೆತ್ತಲೆಯಾಗಿ ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ರೈತರೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದು, ತದನಂತರ ಚೇತರಿಸಿಕೊಂಡರು.

ಕೂಲಿಗೆ ಕಳುಹಿಸಲಾಗುತ್ತಿದೆ: ಪುರಭವನ ಮುಂಭಾಗ ರೈತರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಿನೆಮಾ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಬಂಡವಾಳಶಾಹಿಗಳ ಹಿಡಿತಕ್ಕೆ ಸಿಕ್ಕ ಕೇಂದ್ರ ಸರಕಾರ, ಅವರ ಪರ ನಿಂತಿದೆ. ಈ ರೈತ ಕಾಯ್ದೆಗಳು ಪೂರಕವಾಗಿಲ್ಲ, ಮಾರಕವಾಗಲಿದೆ. ಚರ್ಚೆ ಮಾಡದೇ ಕೃಷಿ ಕಾಯ್ದೆಗಳ ಬಗ್ಗೆ ಪ್ರಧಾನಿ ಸುಗ್ರೀವಾಜ್ಞೆ ತಂದಿದ್ದಾರೆ ಎಂದರು.

ಸದನದಲ್ಲಿ ಚರ್ಚೆ ಮಾಡಿ, ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದ ಅವರು, ಸದನ ಬಹಿಷ್ಕಾರ ಮಾಡಿ ವಿರೋಧ ಪಕ್ಷಗಳು ಈ ಕಾಯ್ದೆ ಬಗ್ಗೆ ಧ್ವನಿಗೂಡಿಸಬೇಕು. ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಹಣ ನೀಡೋಕೆ ಆಗುತ್ತೆ, ರೈತರಿಗೆ ಆರ್ಥಿಕ ಸಹಾಯ ಮಾಡಲು ಆಗೋದಿಲ್ವಾ ಎಂದು ಮುಖ್ಯಮಂತ್ರಿ ಚಂದ್ರು ಖಾರವಾಗಿ ಪ್ರಶ್ನಿಸಿದರು.

ರೈತರ ಈ ಹೋರಾಟ ಬೆಂಬಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋರಾಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು, ರೈತರು ನಡೆಸುತ್ತಿರುವ ಹೋರಾಟದಲ್ಲಿ ಜಾತಿ, ಧರ್ಮ, ಪಕ್ಷದ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಿದ್ದು, ಇದು ಸ್ವಾತಂತ್ರ್ಯ ಹೋರಾಟಕ್ಕೆ ಸಮ ಎಂದು ಹೇಳಿದರು.

ಜನಸಂಖ್ಯೆಯಲ್ಲಿ ಶೇ.78ರಷ್ಟು ರೈತರಿದ್ದಾರೆ. ಅವರಿಗೆ ಮರಣಶಾಸನವಾಗಿರುವ ಕಾಯ್ದೆಗಳನ್ನು ಕೇಂದ್ರ ಸರಕಾರ ತಂದಿದೆ. ಅನ್ನದಾತರ ಬಾಯಿಗೆ ಮಣ್ಣು ಸುರಿಯುವ ಪ್ರಯತ್ನ ಇದಾಗಿದೆ. ಈ ಕರಾಳ ಕಾಯ್ದೆ ರೂಪಿಸುವಾಗ ರೈತ ಮುಖಂಡರು, ಕಾಂಗ್ರೆಸ್ ಅಥವಾ ಇತರೆ ಯಾವ ಪಕ್ಷದವರ ಸಲಹೆಯನ್ನೂ ಪಡೆದಿಲ್ಲ. ಕೃಷಿ ಮಾರುಕಟ್ಟೆಗಳ ಮೇಲೆ ಖಾಸಗಿ ಕಂಪೆನಿಗಳ ಕಣ್ಣು ಬಿದ್ದಿದ್ದು, ರೈತರ ಮೇಲೆ ಕಾಯ್ದೆಗಳನ್ನು ಹೇರಿ ಆ ಕಂಪನಿಗಳ ಗುಲಾಮರನ್ನಾಗಿ ಮಾಡಲಾಗುತ್ತಿದೆ. ರೈತರ ಸ್ವಾವಲಂಬಿ ಬದುಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಇದೆ. ಸದನದ ಒಳಗೂ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಾಗ್ವಾದ

ಭಾರತ್ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ಕೈಗೊಂಡಿದ್ದ ಪ್ರತಿಭಟನೆಯ ವೇಳೆ ಜಿಲ್ಲಾ ಪೊಲೀಸರು ಹಾಗೂ ಮುಖಂಡರೊಂದಿಗೆ ಕೆಲಕಾಲ ವಾಗ್ವಾದ ನಡೆಯಿತು. ವೃತ್ತದ ಎಡಬದಿಯಲ್ಲಿ ಅನಂತಪುರ ರಸ್ತೆಗೆ ಹಾದು ಹೋಗುವ ಮಾರ್ಗವನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ, ಸ್ಥಳಕ್ಕಾಗಮಿಸಿದ ಎಎಸ್ಪಿ ಬಿ.ಎನ್.ಲಾವಣ್ಯ ಆಕ್ಷೇಪ ವ್ಯಕ್ತಪಡಿಸಿದರು.

ಭಾರತ್ ಬಂದ್ ಚಳುವಳಿ ನಡೆಸಿದ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಇಲ್ಲಿನ ಟೌನ್‍ಹಾಲ್, ಮೈಸೂರು ಬ್ಯಾಂಕ್ ವೃತ್ತ, ಮೆಜೆಸ್ಟಿಕ್, ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ, ಕೆಆರ್ ಮಾರುಕಟ್ಟೆ ಹೀಗೆ, ಜನದಟ್ಟಣೆ ಕೇಂದ್ರಗಳಲ್ಲಿ ಹೆಚ್ಚಾಗಿ ಪೊಲೀಸರು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಬೆಂಗಳೂರಿನಾದ್ಯಂತ 15 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ತಪಾಸಣೆ

ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೂರು ಪ್ರವೇಶ ದ್ವಾರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಮಂಗಳವಾರ ಮುಂಜಾನೆಯಿಂದ ವಾಹನಗಳ ತಪಾಸಣೆ ಕಾರ್ಯ ಮಾಡಲಾಯಿತು. ಬೋರ್ಡಿಂಗ್ ಪಾಸ್ ಇದ್ದ ಪ್ರಯಾಣಿಕರಿಗೆ ಏರ್ಪೋರ್ಟ್‍ಗೆ ಪ್ರವೇಶ ನೀಡಲಾಯಿತು. ಉಳಿದ ಪ್ರಯಾಣಿಕರನ್ನ ಟೋಲ್‍ನಿಂದ ಹೊರಗೆ ಕಳಿಸಲಾಯಿತು ಎನ್ನಲಾಗಿದೆ.

ಎತ್ತಿನಗಾಡಿ ಏರಿ ವಾಟಾಳ್ ಪ್ರತಿಭಟನೆ

ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಎತ್ತಿನಗಾಡಿ ಮೂಲಕ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತಂದಿವೆ. ಇವುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವವರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿವೆ ಎಂದು ದೂರಿದರು.

ಆನ್‍ಲೈನ್ ತರಗತಿಗೂ ತಟ್ಟಿದ ಬಿಸಿ

ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ನಡೆಸಿದ ಭಾರತ್ ಬಂದ್‍ಗೆ ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳು ಬೆಂಬಲ ವ್ಯಕ್ತಪಡಿಸಿ, ಮಂಗಳವಾರ ಆನ್‍ಲೈನ್ ತರಗತಿ ಸ್ಥಗಿತಗೊಳಿಸಲಾಗಿತ್ತು.

ರೂಪ್ಸಾ, ಕುಸುಮ ಸೇರಿದಂತೆ ಹಲವು ಖಾಸಗಿ ಶಾಲಾ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದ ಹಿನ್ನೆಲೆ ಹಲವು ಜಿಲ್ಲಾ ಸದಸ್ಯರಿಗೆ ಈ ಕುರಿತು ಮಾಹಿತಿ ರವಾನೆ ಮಾಡಲಾಗಿತ್ತು. ಅದರಂತೆ ಯಾವುದೇ ರೀತಿಯ ತರಗತಿಯನ್ನು ನಡೆಸಿಲ್ಲ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದರು.

ಕಾರ್ಪೋರೇಟ್ ಪಿಎಂ

ನರೇಂದ್ರ ಮೋದಿ ಅವರು ರೈತರ ಪ್ರಧಾನಿ ಅಲ್ಲ. ಬದಲಾಗಿ ಕಾರ್ಪೋರೇಟ್‍ಗಳ ಪಿಎಂ ಆಗಿದ್ದಾರೆ. ಸರಕಾರ ಮೊಂಡು ಹಠ ಬಿಟ್ಟು, ರೈತರ ಪರವಾಗಿ ನಿಲ್ಲಬೇಕು. ಸರಕಾರ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದು.

-ಕುರುಬೂರು ಶಾಂತಕುಮಾರ್, ರೈತ ಮುಖಂಡ

ಪ್ರಧಾನಿ ನರೇಂದ್ರ ಮೋದಿ ಸರಕಾರದ 3 ಕರಾಳ ಕೃಷಿ ಕಾಯ್ದೆಗಳು ರೈತರ ಪಾಲಿನ ಮರಣ ಶಾಸನಗಳು. ರೈತರು ದೆಹಲಿ ಗಡಿ ನಿರ್ಬಂಧಿಸಿದ ಬಳಿಕ ಸರಕಾರದಿಂದ ಚರ್ಚೆಯ ಇಂಗಿತ ವ್ಯಕ್ತವಾಗಿದೆ. ಒಪ್ಪಂದದ ಕೃಷಿಯ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ರೈತರನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ.

-ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News