×
Ad

ನೆರೆ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಭೂ ಸುಧಾರಣಾ ತಿದ್ದುಪಡಿ ತರಲಾಗಿದೆ: ಸಿಎಂ ಯಡಿಯೂರಪ್ಪ

Update: 2020-12-08 19:33 IST

ಬೆಂಗಳೂರು, ಡಿ. 8: ನೆರೆ ರಾಜ್ಯಗಳಲ್ಲಿನ ಕೃಷಿ ಭೂಮಿಗೆ ಸಂಬಂಧಿಸಿದಂತಿರುವ ಕಾಯ್ದೆಗಳನ್ನು ಅಧ್ಯಯನ ಮಾಡಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ತಂದಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್‍ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಭೂ ಸುಧಾರಣಾ ಕಾಯ್ದೆಗಳಿದ್ದು, ಅಲ್ಲಿ ಅಧ್ಯಯನ ನಡೆಸಿದ್ದೇವೆ. ಅಲ್ಲೆಲ್ಲಿಯೂ 79 ಎ ಮತ್ತು ಬಿ ಇಲ್ಲ. ಹೀಗಾಗಿ, ನಾವದನ್ನು ತೆಗೆದಿದ್ದೇವೆ ಎಂದು ತಿಳಿಸಿದರು.

ನೀರಾವರಿ ಭೂಮಿಯನ್ನು ಖರೀದಿ ಮಾಡಿದರೆ ಕೇವಲ ಕೃಷಿಗಷ್ಟೇ ಬಳಕೆ ಮಾಡಬೇಕು ಎಂಬ ನಿಯಮ ಮಾಡಿದ್ದೇವೆ. ಎಲ್ಲ ರಾಜ್ಯಗಳಲ್ಲಿಯೂ ಅಧ್ಯಯನ ನಡೆಸಿದ ಬಳಿಕವೇ ನಾವು ತಿದ್ದುಪಡಿ ಕಾಯ್ದೆಯನ್ನು ಮಾಡಿದ್ದೇವೆ. ರೈತರು ಜಾಗೃತಗೊಂಡಿದ್ದು, ಕಾಯ್ದೆ ಬಂದ ಕೂಡಲೇ ತಮ್ಮ ಭೂಮಿಯನ್ನು ಮಾರಿಕೊಳ್ಳುವುದಿಲ್ಲ. ಏನು ಮಾಡಬೇಕು ಮತ್ತ ಮಾಡಬಾರದೆಂದು ರೈತರಿಗೆ ತಿಳಿದಿದೆ ಎಂದು ಯಡಿಯೂರಪ್ಪ ನುಡಿದರು.

ರಾಜ್ಯದಲ್ಲಿ ಇದುವರೆಗೂ ಶೇ.2 ರಷ್ಟು ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆಯಾಗಿಲ್ಲ. ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡಲು ಈ ಕಾನೂನು ರೂಪಿಸಿದ್ದೇವೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಸಮಸ್ಯೆಯಾಗುವ ಅಥವಾ ಅನಾನುಕೂಲವಾಗುವ ಯಾವುದೇ ಕಾನೂನುಗಳನ್ನು ನಾವು ಜಾರಿ ಮಾಡುವುದಿಲ್ಲ ಎಂದು ಹೇಳಿದರು.

ಬಳಿಕ ಮಾತು ಮುಂದುವರೆಸಿದ ಮರಿತಿಬ್ಬೇಗೌಡ, ಸರಕಾರ ಈ ಕಾಯ್ದೆಯನ್ನು ತಂದರೆ ರೈತರಿಗೆ ಮಾರಕವಾಗುತ್ತದೆ. ಅಲ್ಲದೆ, ಜಾನುವಾರುಗಳು ಮೇವಿಲ್ಲದೇ ತನ್ನಷ್ಟಕ್ಕೆ ತಾನೇ ಸಾಯುವಂತಹ ಪರಿಸ್ಥಿತಿ ಬರುತ್ತದೆ. ಗೋ ರಕ್ಷಣೆಗಾಗಿ ಸರಕಾರ ಹೊಸದಾಗಿ ಪ್ರತ್ಯೇಕ ಕಾನೂನು ತರುವ ಅಗತ್ಯವಿಲ್ಲ ಎಂದು ಲೇವಡಿ ಮಾಡಿದರು.

ಎಲ್ಲ ಪಕ್ಷಗಳಲ್ಲಿಯೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬರಬೇಕು ಎನ್ನುವವರಿದ್ದಾರೆ. ಅದೇ ರೀತಿ ಬಿಜೆಪಿ ಸೇರಿದಂತೆ ವಿಪಕ್ಷಗಳಲ್ಲಿಯೂ ಬಹಳಷ್ಟು ಜನರು ಈ ಕಾಯ್ದೆಯ ವಿರುದ್ಧವೂ ಇದ್ದಾರೆ. ಆದರೆ, ಸರಕಾರ ಜನಾಭಿಪ್ರಾಯಕ್ಕೆ ಆದ್ಯತೆ ನೀಡಬೇಕು. ಜನರು ಕಾಯ್ದೆಯ ವಿರುದ್ಧವಾಗಿದ್ದಾರೆ. ಸರಕಾರ ರೈತರಿಗೆ ಬೇರೆ ಯಾವ ಸೌಲಭ್ಯ ಕೊಡಲಿಲ್ಲ ಅಂದರೂ ಪರವಾಗಿಲ್ಲ, ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲಿ. ಸರಕಾರ ನೀಡುವ ಪರಿಹಾರ ಏನಕ್ಕೂ ಸಾಕಾಗುವುದಿಲ್ಲ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News