ಹೋರಾಟ ನಿರತ ರೈತರನ್ನು ಅವಮಾನಿಸಿದ ಶೋಭಾ ಕರಂದ್ಲಾಜೆ

Update: 2020-12-08 14:13 GMT

ಚಿಕ್ಕಮಗಳೂರು, ಡಿ.8: ದಿಲ್ಲಿಯಲ್ಲಿ ಕೃಷಿ ಮಸೂದೆಗಳ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಶಾಹಿನ್‍ ಬಾಗ್ ಮತ್ತು ಖಾಲಿಸ್ತಾನಿಗಳ ತುಕಡೇ ಗ್ಯಾಂಗ್ ಹಸಿರು ಸಾಲು ಹೊದ್ದು ಪಾಲ್ಗೊಂಡಿವೆ. ದಿಲ್ಲಿಯ ರೈತ ಚಳವಳಿ ರಾಜಕೀಯ ಪ್ರೇರಿತ ಹಾಗೂ ಸ್ಥಾಪಿತ ಹಿತಾಸಕ್ತಿಗಳ ಹೋರಾಟವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿಎಎ ಚಳವಳಿಯಲ್ಲಿ ಭಾಗವಹಿಸಿದ್ದ ಶಾಹಿನ್‍ ಬಾಗ್ ತುಕಡೇ ತುಕಡೇ ಗ್ಯಾಂಗ್ ಕೂಡ ಹಸಿರು ಶಾಲು ಹೊದ್ದು ರೈತ ಹೋರಾಟದಲ್ಲಿ ಭಾಗವಹಿಸಿವೆ. ದಿಲ್ಲಿಯ ರೈತ ಚಳವಳಿ ರಾಜಕೀಯ ಪ್ರೇರಿತ ಹಾಗೂ ಸ್ಥಾಪಿತ ಹಿತಾಸಕ್ತಿಗಳ ಹೋರಾಟ. ವಿರೋಧಕ್ಕಾಗಿ ವಿರೋಧ ಮಾಡುವ ನಾಟಕವನ್ನು ವಿಪಕ್ಷಗಳು ಮಾಡುತ್ತಿವೆ. ಈ ಷಡ್ಯಂತ್ರದ ಬಗ್ಗೆ ಜನಸಾಮಾನ್ಯರು, ರೈತರು ಅರ್ಥಮಾಡಿಕೊಳ್ಳಬೇಕು ಎಂದ ಅವರು, ಪಂಜಾಬಿಗರ ತ್ಯಾಗ, ಬಲಿದಾನದ ಬಗ್ಗೆ ಗೌರವವಿದೆ. ಆದರೆ, ಕೆನಡಾ ಮತ್ತು ಇಂಗ್ಲೆಂಡ್‍ನಲ್ಲಿ ಖಾಲಿಸ್ತಾನ್ ಚಳವಳಿಯ ಬೀಜ ಇನ್ನೂ ಉಳಿದುಕೊಂಡಿದೆ. ಅವರು ಇನ್ನೂ ಖಾಲಿಸ್ತಾನ್ ಚಳವಳಿ ಬಗ್ಗೆ ಮಾತಾಡುತ್ತಾರೆ. ಸಂಸದರಿಗೆ ಧ್ವನಿ ಮುದ್ರಿಕೆ ಕಳುಹಿಸಿ ಪಂಜಾಬಿನ ಪೊಲೀಸ್ ಮತ್ತು ಸೈನ್ಯ ಭಾರತದ ವಿರುದ್ಧ ತಿರುಗಿಬೀಳಬೇಕು ಎಂದು ಪ್ರಚೋದಿಸುತ್ತಾರೆ. ದೇಶ ವಿರೋಧಿ ಚಟುವಟಿಕೆಯಲ್ಲಿದ್ದವರು ಕೂಡ ರೈತ ಹೋರಾಟಕ್ಕೆ ಕೈಜೋಡಿಸಿದ್ದಾರೆ ಎಂದು ದೂರಿದರು.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯಿದೆ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಹಾಗೂ ಅಗತ್ಯ ಸರಕುಗಳ ಕಾಯಿದೆಗಳನ್ನು ಕಳೆದ ಅವೇಶನದಲ್ಲಿ ಮಂಡಿಸಿ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ 3 ತಾಸು ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ. ರೈತರ ಬೆಳೆಗೆ ಈ ಬಾರಿ ಬೆಂಬಲ ಬೆಲೆ ದೊರಕಿದೆ. ಆದರೆ, ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ರಫ್ತು, ಆಮದು ಮಾರಾಟ ನಿಯಂತ್ರಿಸುವ ಮಧ್ಯವರ್ತಿಗಳು ಈ ಹೋರಾಟದ ಹಿಂದೆ ಇದ್ದಾರೆ. ಇವರಿಗೆ ಮಣಿದು ಪಂಜಾಬ್ ಸರಕಾರ ರೈತ ಹೋರಾಟಕ್ಕೆ ಬೆಂಬಲ ನೀಡಿದೆ ಎಂದು ದೂರಿದರು.

ಕಳೆದ 2 ಲೋಕಸಭೆ ಚುನಾವಣೆಯಲ್ಲಿ ನೂತನ ಕೃಷಿ ಕಾಯ್ದೆ ಬೆಂಬಲ ಹಾಗೂ ಎಪಿಎಂಸಿಯಿಂದ ರೈತರನ್ನು ಮುಕ್ತಮಾಡುತ್ತೇವೆ ಎಂಬುದು ಕಾಂಗ್ರೆಸ್ ಪ್ರಣಾಳಿಕೆ ಆಗಿತ್ತು. ಯುಪಿಎ ಕೂಟದಲ್ಲಿದ್ದ ಶರದ್ ಪವಾರ್ ಕೂಡ ಮುಖ್ಯಮಂತ್ರಿಗೆ ಪತ್ರ ಬರೆದು ಕೃಷಿ ವಲಯದಲ್ಲಿ ಖಾಸಗೀಕರಣಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ ಕೂಡ ಅಂದಿನ ಕಾಂಗ್ರೆಸ್ ನೇತೃತ್ವದ ಸರಕಾರಗಳಿಗೆ ಪತ್ರ ಬರೆದು ಎಪಿಎಂಸಿಯಿಂದ ಹಣ್ಣು ತರಕಾರಿಗಳನ್ನು ಹೊರಗಿಡಬೇಕು ಎಂದು ಸೂಚನೆ ನೀಡಿದ್ದಾರೆ. ಕೃಷಿ ಕಾಯ್ದೆ ಜಾರಿ ಬಗ್ಗೆ ರಚಿಸಿದ್ದ ಸ್ಥಾಯಿ ಸಮಿತಿ ಸದಸ್ಯರಾಗಿ ಕಾಂಗ್ರೆಸ್ ಮುಖಂಡರಾದ ಕಮಲ್‍ನಾಥ್ ಮತ್ತು ಅಮರಿಂದರ್ ಸಿಂಗ್ ಕೂಡ ಇದ್ದರು. ಅಂದರೆ 2013 ರಲ್ಲಿ ಕಾಂಗ್ರೆಸ್ ಕೃಷಿ ಕಾಯ್ದೆ ಪರವಾಗಿತ್ತು. ಈಗ ವಿರೋಧಕ್ಕಾಗಿ ವಿರೋಧ ಮಾಡಲು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದರು.

ಸಿಪಿಐ ಆಡಳಿತ ಇರುವ ಕೇರಳದಲ್ಲಿ ಎಪಿಎಂಸಿ ಕಾಯ್ದೆಯೇ ಇಲ್ಲ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಕೇಂದ್ರದ ಕೃಷಿ ಕಾಯ್ದೆಗಳನ್ನು ನವಂಬರ್ ನಲ್ಲಿ ಅನುಷ್ಠಾನ ಮಾಡುವುದಾಗಿ ಹೇಳಿ ಈಗ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರಕಾರಕ್ಕೆ ಜನತೆ ಅಭೂತಪೂರ್ವ ಬೆಂಬಲ ನೀಡಿದ್ದು, ಮೂಲೆ ಗುಂಪಾಗಿರುವ ರಾಜಕೀಯ ಪಕ್ಷಗಳು ತಮ್ಮ ಅಸ್ಥಿತ್ವಕ್ಕಾಗಿ ರೈತರ ಹೆಸರಲ್ಲಿ ಮಧ್ಯವರ್ತಿಗಳನ್ನು ಮತ್ತು ಕಮಿಷನ್ ಏಜೆಂಟರನ್ನು ಎತ್ತಿ ಕಟ್ಟಿ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವರಸಿದ್ದಿವೇಣುಗೋಪಾಲ, ಸುಧೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News